×
Ad

ಪಡೀಲ್‌ನಲ್ಲಿ ಸಂಚಾರಕ್ಕೆ ತೊಡಕು: ಸಂಸದ ನಳಿನ್ ವೀಕ್ಷಣೆ

Update: 2017-08-29 22:38 IST

ಮಂಗಳೂರು, ಆ.29: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಡೀಲ್‌ನಲ್ಲಿ ಕಳೆದ ಹಲವು ಸಮಯದಿಂದ ಸಂಚಾರಕ್ಕೆ ತೊಡಕಾಗು ತ್ತಿರುವ ಬಗ್ಗೆ ಮಾಧ್ಯಮಗಳ ವರದಿಯಿಂದ ಎಚ್ಚೆತ್ತ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ರಸ್ತೆಯ ಅವ್ಯವಸ್ಥೆಯನ್ನು ಕಂಡು ರೋಸಿ ಹೋದರಲ್ಲದೆ, ಸ್ವತ: ನಿಂತು ಸಮತಟ್ಟು ಮಾಡಿಸಿದರು. ಹೆದ್ದಾರಿ ಪ್ರಾಧಿಕಾರ ಮತ್ತು ರೈಲ್ವೆ ಇಲಾಖೆಯ ಮಧ್ಯೆ ಸಮನ್ವಯತೆ ಇಲ್ಲ. ಕಳೆದ ಬಾರಿ ಸಭೆ ನಡೆಸಿದಾಗ, ತಿಂಗಳೊಳಗೆ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿದ್ದರು. ಇದೀಗ ಸೆಂಟ್ರಿಂಗ್ ಪೂರ್ಣಗೊಂಡಿಲ್ಲ. ಪ್ರತಿನಿತ್ಯ ಜನರ ದೂರು ಕೇಳಿ ಕೇಳಿ ಸಾಕಾಗಿದೆ ಎಂದ ನಳಿನ್, ನವೆಂಬರ್‌ ತನಕ ಡಾಮರ್ ಪ್ಲಾಂಟ್ ಎಲ್ಲೂ ತೆರೆದಿಲ್ಲ. ಹಾಗಾಗಿ ಹಳೆ ರಸ್ತೆಗೆ ಡಾಮರು ಹಾಕಲು ಸಾಧ್ಯವಿಲ್ಲ. ಆದ್ದರಿಂದ ಈಗ ಹೊಸ ಸೇತುವೆಯಡಿಯ ಸೆಂಟ್ರಿಂಗ್ ಬಿಚ್ಚಿ, ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಿ. ತೆರವು ಮಾಡದಿದ್ದರೆ, ನಾಳೆ ನಾನೇ ತೆಗೆಸುತ್ತೇನೆ ಎಂದು ಅಬ್ಬರಿಸಿದರು.

ಗರ್ಡರ್ ಹಾಕಲು ರೈಲ್ವೆ ಇಲಾಖೆಯಲ್ಲಿ ಒಂದೂವರೆ ಕೋ.ರೂ. ಠೇವಣಿ ಇಟ್ಟರೂ ಅವರು ಆ ಕೆಲಸ ಮಾಡದ ಕಾರಣ ನಾವೇ ಮಾಡಿಸಿದ್ದರಿಂದ ಈ ಸಮಸ್ಯೆಯಾಗಿದೆ. ಹಳೆಯ ರಸ್ತೆಗೆ ಕಾಂಕ್ರಿಟ್ ಹಾಕಲು ಸಾಧ್ಯವಿಲ್ಲ. ಏಕೆಂದರೆ ಸಂಪೂರ್ಣ ವಾಹನ ಸಂಚಾರ ಸಂಪೂರ್ಣ ಸ್ಥಗಿತ ಮಾಡಬೇಕು. ಕಾಂಕ್ರಿಟ್ ಹಾಕಲು ಪ್ರತ್ಯೇಕ ಹಣದ ಅಗತ್ಯವೂ ಇದೆ. ರೈಲ್ವೆ ಇಲಾಖೆ ವಿನ್ಯಾಸ ಪ್ರಕಾರ, ಸೇತುವೆ ಎತ್ತರ ಮಾಡಬೇಕಿದೆ. ಆದ್ದರಿಂದ ಒಂದು ತಿಂಗಳು ಅವಕಾಶ ಕೊಡಿ. ದಸರಾಗೆ ಹೊಸ ಸೇತುವೆ ಬಿಟ್ಟು ಕೊಡುತ್ತೇವೆ ಎಂದು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್‌ಸನ್ ವಿಜಯ್ ಕುಮಾರ್ ಹೇಳಿದರು.

ರಸ್ತೆ ಬದಿಯಲ್ಲಿ ಹಾಕಿದ್ದ ಕಾಂಕ್ರಿಟ್ ಚಪ್ಪಡಿ ಕಲ್ಲುಗಳು, ಜೆಲ್ಲಿ ಹುಡಿಯನ್ನು ತೆರವುಗೊಳಿಸಿ ಹೊಂಡ ಮುಚ್ಚಿಸುವ ಕೆಲಸವನ್ನು ಸ್ವತಃ ಸಂಸದರು ಅಧಿಕಾರಿಗಳ ಮೂಲಕ ಮಾಡಿಸಿ ಸಂಚಾರಕ್ಕೆ ಯಾವುದೇ ತೊಡಕಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.

‘ನಾವು ಒಂದು ವರ್ಷದಿಂದ ಮನೆಗೆ ವಾಹನ ಕೊಂಡು ಹೋಗಲು ಸಾಧ್ಯವಾಗದೆ ಸೇತುವೆ ಅಡಿ ಇಡುತ್ತಿದ್ದೇವೆ. ವಾಹನ ಸಂಚಾರ ಬಿಡಿ, ನಡೆದುಕೊಂಡು ಹೋಗಲೂ ಅಸಾಧ್ಯವಾಗಿದೆ. ಟ್ರಾಫಿಕ್ ಬ್ಲಾಕ್‌ನಿಂದ ಆಟೊ ಚಾಲಕರು ಬಾಡಿಗೆ ಮಾಡದ ಪರಿಸ್ಥಿತಿ ಇದೆ. ಮಕ್ಕಳು ಶಾಲೆಗೆ ಮುಟ್ಟಲು ಒಂದು ಗಂಟೆ ತಡವಾಗುತ್ತಿದೆ’ ಎಂದು ಸ್ಥಳೀಯರು ಸಂಸದರಲ್ಲಿ ತಮ್ಮ ಅಳಲು ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News