‘‘ನಿನ್ನ ಕಣ್ಣೀರಿನ ಪ್ರತಿಯೊಂದು ಹನಿಯೂ ನಮ್ಮ ಹೃದಯವನ್ನು ನೋಯಿಸುತ್ತಿದೆ’’
ಶ್ರೀನಗರ,ಆ.30: ಏಳರ ಹರೆಯದ ರೊಹ್ರಾ ತನ್ನ ಪ್ರೀತಿಯ ತಂದೆಯ ಶವಪೆಟ್ಟಿಗೆ ಯನ್ನೇ ನೋಡುತ್ತ ಕಂಬನಿ ಸುರಿಸುತ್ತಿದ್ದ ಆ ಚಿತ್ರವು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವ ಭದ್ರತಾ ಸಿಬ್ಬಂದಿಗಳು ಮತ್ತು ಅವರ ಕುಟುಂಬಗಳ ದುರಂತವನ್ನು ಕಣ್ಣೆದುರಿಗೆ ತಂದಿದೆ. ಕಳೆದ ಎಂಟು ತಿಂಗಳುಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಹೋರಾಡುತ್ತ 55ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ರೊಹ್ರಾಳ ತಂದೆ ಅಬ್ದುಲ್ ರಶೀದ್ ಪೀರ್ ಅವರಲ್ಲೋರ್ವರಾಗಿದ್ದಾರೆ.
ಅಬ್ದುಲ್ ಸೋಮವಾರ ಎಂದಿನಂತೆ ದಕ್ಷಿಣ ಕಾಶ್ಮೀರದ ಅನಂತನಾಗ್‌ನಲ್ಲಿ ಜನನಿಬಿಡ ಮಾರುಕಟ್ಟೆಯ ಬಳಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು.
ಭದ್ರತಾ ಪಡೆಗಳು ಇತ್ತೀಚಿನ ತಿಂಗಳುಗಳಲ್ಲಿ ಭಯೋತ್ಪಾದಕರ ವಿರುದ್ಧ ದಾಳಿಯನ್ನು ತೀವ್ರಗೊಳಿಸಿವೆ. ಈ ದಾಳಿಗಳು ಭಯೋತ್ಪಾದಕರನ್ನು ಕಂಗೆಡಿಸಿವೆ ಮತ್ತು ಇದಕ್ಕಾಗಿ ಭದ್ರತಾ ಪಡೆಗಳು ದುಬಾರಿ ಬೆಲೆಯನ್ನು ತೆರುತ್ತಿವೆ. ಕಳೆದ ವಾರಾಂತ್ಯದಲ್ಲಿ ಒಂದೇ ದಿನ ನೆರೆಯ ಪುಲ್ವಾಮಾ ಜಿಲ್ಲೆಯಲ್ಲಿ ಎಂಟು ಭದ್ರತಾ ಸಿಬ್ಬಂದಿಗಳು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ.ಅಬ್ದುಲ್‌ರ ನಿವಾಸದ ಬಳಿ ಅವರ ಸಹೋದ್ಯೋಗಿಗಳು ಮತ್ತು ಸರಕಾರಿ ಅಧಿಕಾರಿಗಳು ಶವಪೆಟ್ಟಿಗೆಯ ಮೇಲೆ ಪುಷ್ಪಗುಚ್ಛಗಳನ್ನಿರಿಸಿ ಶ್ರದ್ಧಾಂಜಲಿಗಳನ್ನು ಸಲ್ಲಿಸಿದ ಬಳಿಕ ‘‘ನಮ್ಮ ತಂದೇ ಯಾವುದೇ ತಪ್ಪು ಮಾಡಿರಲಿಲ್ಲ. ಅವರನ್ನೇಕೆ ಕೊಂದಿದ್ದಾರೆ? ಆದರೆ ಅವರು ಹುತಾತ್ಮರಾಗಿರುವುದು ನನಗೆ ಹೆಮ್ಮೆಯನ್ನುಂಟು ಮಾಡಿದೆ. ಅವರನ್ನು ಕೊಂದವರಿಗೆ ಶಿಕ್ಷೆಯಾಗಬೇಕೆಂದು ನಾನು ಬಯಸಿದ್ದೇನೆ’’ ಎಂದು ರೊಹ್ರಾಳ ಹಿರಿಯ ಸಹೋದರಿ ಹೇಳಿದ್ದಳು. ಈ ವೇಳೆ ವೌನವಾಗಿ ಬಿಕ್ಕುತ್ತ ನಿಂತಿದ್ದ ರೊಹ್ರಾ ಅವರ ಕಣ್ಣಿಗೆ ಬಿದ್ದಿದ್ದಳು.
‘‘ನಿನ್ನ ಕಂಬನಿಗಳು ಹಲವರ ಹೃದಯಗಳನ್ನು ಕಲಕಿವೆ. ನಿನ್ನ ಕಣ್ಣೀರಿನ ಪ್ರತಿಯೊಂದು ಹನಿಯೂ ನಮ್ಮ ಹೃದಯವನ್ನು ನೋಯಿಸುತ್ತಿದೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಫೇಸ್‌ಬುಕ್‌ನಲ್ಲಿ ರೊಹ್ರಾಳನ್ನುದ್ದೇಶಿಸಿ ಪೋಸ್ಟ್ ಮಾಡಿದ್ದಾರೆ. ನಿನ್ನ ತಂದೆ ಕರ್ತವ್ಯಕ್ಕಾಗಿ ತನ್ನ ಬಲಿದಾನ ಮಾಡಿದ ನಿಜವಾದ ಪೊಲೀಸ್ ಆಗಿದ್ದಾರೆ ಎಂದೂ ಅವರು ಬಣ್ಣಿಸಿದ್ದಾರೆ..
ಅಂದು ರೊಹ್ರಾಳನ್ನು ಸಾಂತ್ವನಗೊಳಿಸಲು ಮುಂದಾದ ದಕ್ಷಿಣ ಕಾಶ್ಮೀರದ ಡಿಐಜಿ ಎಸ್.ಪಿ.ಪಾಣಿ ಅವರು, ಮಗು....ಇದೆಲ್ಲ ಹೇಗಾಯಿತೆಂದು ತಿಳಿದುಕೊಳ್ಳಲು ನೀನು ಇನ್ನೂ ತೀರ ಸಣ್ಣವಳು ಎಂದು ಹೇಳಿದ್ದರು. ಭಾವೋದ್ವೇಗಗೊಂಡಿದ್ದ ಅವರ ಕಣ್ಣುಗಳಿಂದಲೂ ಹನಿಗಳು ತೊಟ್ಟಿಕ್ಕುತ್ತಿದ್ದವು. ಸಮಾಜದ ಒಳಿತಿಗಾಗಿ ಬಹಳಷ್ಟು ಪೊಲೀಸ್ ಕುಟುಂಬಗಳು ಎಂದೂ ಸರಿಪಡಿಸಲಾಗದ, ಇಂತಹ ದುರಂತಕ್ಕೊಳಗಾಗಿವೆ ಎಂದು ಅವರು ರೊಹ್ರಾಗೆ ಹೇಳಿದ್ದರು.