×
Ad

ಸೆ 4ರಿಂದ ಮೂಡುಬಿದಿರೆಯಲ್ಲಿ ರಾಜ್ಯಮಟ್ಟದ ಅಥ್ಲೆಟಿಕ್ಸ್

Update: 2017-08-30 22:36 IST

ಮೂಡುಬಿದಿರೆ, ಆ. 30: ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಶನ್  ಹಾಗೂ  ಆಳ್ವಾಸ್ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆ. 4-6ರವರೆಗೆ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗದ ಅಥ್ಲೆಟಿಕ್ಸ್ ಚಾಂಪಿಯನ್ ಶಿಫ್ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿರುವ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಕ್ರೀಡಾಕೂಟದಲ್ಲಿ ಬಾಲಕ ಹಾಗೂ ಬಾಲಕಿಯರ 14, 16, 18 ಮತ್ತು 20 ವಯೋಮಿತಿ ಹಾಗೂ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾ ಕ್ಲಬ್, ರೈಲ್ವೇ, ಕ್ರೀಡಾ ಶಾಲೆಗಳು, ಬೆಂಗಳೂರಿನ ಎಂ.ಐ.ಜಿ, ಏರ್‍ಪೋಸ್ ಹಾಗೂ ಅರಣ್ಯ ಇಲಾಖೆ ತಂಡಗಳು  ಈ ಕೂಟದಲ್ಲಿ ಭಾಗವಹಿಸಲಿವೆ.

ಜ್ಯೂನಿಯರ್‍ನ 8 ಹಾಗೂ ಸೀನಿಯರ್‍ನ 2 ಹೀಗೆ ಒಟ್ಟು 10 ವಿಭಾಗದ ತಂಡ ಪ್ರಶಸ್ತಿ ಹಾಗೂ ಸಮಗ್ರ ಚಾಂಪಿಯನ್‍ಶಿಪ್‍ಗಾಗಿ ರಾಜ್ಯದ ಸುಮಾರು 2,000 ಮಂದಿ ಕ್ರೀಡಾಪಟುಗಳು ಭಾಗವಹಿಸಲಿದ್ದು, ಸುಮಾರು 500 ಮಂದಿ ಕ್ರೀಢಾಧಿಕಾರಿಗಳು ಸಹಕರಿಸಲಿದ್ದಾರೆ. ಈ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ತೋರುವ ನಿರ್ವಹಣೆಯ ಆಧಾರದ ಮೇಲೆ ದಕ್ಷಿಣ ವಲಯ ಜ್ಯೂನಿಯರ್ ಕ್ರೀಡಾಕೂಟ, ರಾಷ್ಟ್ರೀಯ ಜ್ಯೂನಿಯರ್ ಕ್ರೀಡಾಕೂಟ ಹಾಗೂ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟಗಳಿಗೆ ಆಯ್ಕೆಯನ್ನು ನಡೆಸಲಾಗುತ್ತದೆ. 

ಉದ್ಘಾಟನೆ : ಸೆ. 4ರಂದು ಬೆಳಿಗ್ಗೆ 10.30ಕ್ಕೆ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಯುವಸಬಲೀಕರಣ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿರುವರು. ಮಾಜಿ ಸಚಿವ, ಶಾಸಕ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ ಉಪಸ್ಥಿತರಿವರು ಎಂದು ಆಳ್ವರು ತಿಳಿಸಿದರು.

ಸಾರ್ವಜನಿಕ ಸಂಪರ್ಕಾಧಿಕಾರಿ ಪದ್ಮನಾಭ ಶೆಣೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News