×
Ad

ಬೇರೆ ಧರ್ಮದವರಿಗೆ ತೊಂದರೆಯಾಗದಂತೆ ಬಕ್ರೀದ್ ಆಚರಿಸಲು ಕರೆ

Update: 2017-08-30 22:45 IST

ಭಟ್ಕಳ, ಆ. 30: ಹಬ್ಬಗಳು ಶಾಂತಿಯ ದ್ಯೋತಕವಾಗಿದ್ದು ಹಬ್ಬ ಆಚರಿಸುವ ಸಂದರ್ಭದಲ್ಲಿ ಮತ್ತೊಂದು ಸಮುದಾಯಕ್ಕೆ ತೊಂದರೆಯಾಗದಂತೆ ಆಚರಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲಯ್ಯ ಬ್ಯಾಕೋಡ್ ಕರೆ ನೀಡಿದರು.

ಅವರು ಬುಧವಾರ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಆಯೋಜಿಸಿದ್ದ ಶಾಂತಿ ಸಭೆಯಅಧ್ಯಕ್ಷತೆವಹಿಸಿ ಮಾತನಾಡಿದರು.

ಬಕ್ರೀದ್ ಹಬ್ಬದ ಆಚರಣೆಯ ಹಿನ್ನೆಲೆ ಪ್ರವಾದಿ ಇಬ್ರಾಹಿಂ ರು ದೇವರ ಆದೇಶವನ್ನು ಪಾಲಿಸಲು ತನ್ನ ಮಗನಿಗೆ ಬಲಿಯರ್ಪಿಸುವುದಾಗಿದೆ ಈ ನಿಟ್ಟಿನಲ್ಲಿ ಮುಸ್ಲಿಮರು ಪ್ರಾಣಿಬಲಿ ನೀಡಿ ಆ ಮಹಾನ್ ತ್ಯಾಗಬಲಿದಾನಗಳನ್ನು ಸ್ಮರಿಸುತ್ತಾರೆ. ಹಬ್ಬದ ದಿನ ಎಲ್ಲರೂ ಶಾಂತಿ ಸೌಹಾರ್ಧತೆಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಹಬ್ಬಗಳು ಬೇರೆ ಧರ್ಮದ ಜನರಿಗೆ ತೊಂದರೆ ನೀಡದಂತೆ ಆಚರಿಸಬೇಕು. ಭಟ್ಕಳದಲ್ಲಿ ಗಣೇಶ ಹಬ್ಬವು ಅತ್ಯಂತ ಶಾಂತಿಯಿಂದ ಆಚರಿಸಿದ್ದೀರಿ. ಎಲ್ಲರೂ ಇದಕ್ಕೆ ಸಹಕರಿಸಿದ್ದಾರೆ. ಈ ಬಕ್ರೀದ್ ಹಬ್ಬದಲ್ಲೂ ಎಲ್ಲ ಸಮುದಾಯದವರು ಶಾಂತಿಯನ್ನು ಕಾಪಾಡಲು ಸಹಕರಿಸಬೇಕು ಎಂದರು.

ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ್ ಮಾತನಾಡಿ ಹಬ್ಬಗಳು ಸಮಾಜದ ಒಳಿತಿಗಾಗಿ ಆಚರಿಸಲ್ಪಡುತ್ತವೆ. ಯಾವುದೇ ವ್ಯಕ್ತಿಯ ಭಾವನೆಗಳಿಗೆ ಧಕ್ಕೆಯಾಗದಂತೆ ಹಬ್ಬಗಳನ್ನು ಆಚರಿಸಬೇಕಾಗಿದೆ ಎಂದರು. ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ, ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಖ್ ಮಟ್ಟಾ ಮತ್ತಿತರರು ಸಂದರ್ಭೋಚಿತವಾಗಿ ಮಾತನಾಡಿ ಬಕ್ರಿದ್ ಹಬ್ಬವನ್ನು ಶಾಂತಿ, ಸೌಹಾರ್ಧತೆಯೊಂದಿಗೆ ಆಚರಿಸಲು ಒತ್ತು ನೀಡಿದರು.
ವೇದಿಕೆಯಲ್ಲಿ ಡಿ.ವೈಎಸ್ಪಿ ಶಿವಕುಮಾರ್, ಸಿಪಿಐ ಸುರೇಶ್ ನಾಯಕ, ಪುರಸಭೆಯ ಕೆ.ಎಂ.ಅಶ್ಫಾಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News