×
Ad

ಇಸ್ರೋದಿಂದ ‘ಬದಲಿ’ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ

Update: 2017-08-30 23:12 IST

ಹೊಸದಿಲ್ಲಿ, ಆ. 30: ಭಾರತೀಯ ಪ್ರಾದೇಶಿಕ ಪಥನಿರ್ದೇಶಕ ಉಪಗ್ರಹ ವ್ಯವಸ್ಥೆ (ಐಆರ್‌ಎನ್‌ಎಸ್‌ಎಸ್) ಸರಣಿಯ 8ನೆ ಉಪಗ್ರಹ ಐಆರ್‌ಎನ್‌ಎಸ್‌ಎಸ್-1ಎಚ್ ಗುರುವಾರ ಉಡಾವಣೆಗೊಳ್ಳಲಿದೆ. ಬುಧವಾರ 2 ಗಂಟೆಯಿಂದ ಉಪಗ್ರಹದ ಉಡಾವಣೆಗೆ 29 ತಾಸುಗಳ ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ಇಸ್ರೋ) ಹೇಳಿದೆ.

ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಎರಡನೆ ಉಡಾವಣಾ ವೇದಿಕೆಯಿಂದ ಈ ಉಪಗ್ರಹವನ್ನು ಉಡಾಯಿಸಲಾಗುವುದು. ಎಲ್ಲಾ 3 ಪರಮಾಣು ಗಡಿಯಾರ ವಿಫಲವಾದ ಹಿನ್ನೆಲೆಯಲ್ಲಿ ಐಆರ್‌ಎನ್‌ಎಸ್‌ಎಸ್-1ಎ ಸ್ಥಾನದಲ್ಲಿ ಈ ಇತ್ತೀಚಿನ ಉಪಗ್ರಹ ಕಾರ್ಯ ನಿರ್ವಹಿಸಲಿದೆ.

ರಶ್ಯಾದ ಗ್ಲೋನಾಸ್ ಉಪಗ್ರಹದಲ್ಲಿ ಕೂಡ ಇದೇ ರೀತಿ ಸಮಸ್ಯೆ ಉಂಟಾಗಿತ್ತು. ಆಗ ಯುರೋಪ್‌ನ ಬಾಹ್ಯಾಕಾಶ ಸಂಸ್ಥೆ ಇದೇ ರೀತಿ ಯೋಜನೆ ರೂಪಿಸಿತ್ತು ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

1,425 ಕಿ.ಗ್ರಾಂ. ತೂಕದ ಈ ಉಪಗ್ರಹ ಪಿಎಸ್‌ಎಲ್‌ವಿ-ಸಿ39ರಿಂದ ಗುರುವಾರ ಬೆಳಗ್ಗೆ 7 ಗಂಟೆಗೆ ಉಡಾವಣೆಗೊಳ್ಳಲಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News