×
Ad

ರೇಶನ್ ಅಂಗಡಿಗಳಲ್ಲಿ ಸಕ್ಕರೆ ಭಾಗ್ಯವೂ ಸಿಗಲಿ: ಸಿಪಿಎಂ ಒತ್ತಾಯ

Update: 2017-08-30 23:24 IST

ಉಡುಪಿ, ಆ.30: ರಾಜ್ಯ ಸರಕಾರ ರೇಷನ್ ಅಂಗಡಿಗಳಲ್ಲಿ ರಿಯಾಯಿತಿ ದರದಲ್ಲಿ ನೀಡುತ್ತಿರುವ ಸಕ್ಕರೆ, ಗೋಧಿ, ಎಣ್ಣೆ, ಮೊದಲಾದ ದಿನಬಳಕೆಯ ವಸ್ತುಗಳನ್ನು ಸಮರ್ಪಕವಾಗಿ ವಿತರಣೆಯಾಗುವಂತೆ ಕ್ರಮವಹಿಸಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಸರಕಾರವನ್ನು ಒತ್ತಾಯಿಸಿದೆ.

ಸರಕಾರ ಹೊಸದಾಗಿ ‘ಆರೋಗ್ಯ ಭಾಗ್ಯ’ ಯೋಜನೆಯನ್ನು ಪ್ರಕಟಿಸಿದೆ. ಬಡ, ಮಧ್ಯಮ ವರ್ಗದ ಜನರಿಗೆ ಉಪಯುಕ್ತವಾಗುವ ಎಲ್ಲಾ ಯೋಜನೆ ಗಳನ್ನು ಸಿಪಿಎಂ ಸ್ವಾಗತಿಸುತ್ತದೆ. ಆದರೆ ರೇಷನ್ ಅಂಗಡಿಗಳಲ್ಲಿ ಇದುವರೆಗೆ ರಿಯಾಯಿತಿ ದರದಲ್ಲಿ ಸಿಗುತ್ತಿದ್ದ ಸಕ್ಕರೆ, ತಾಳೆ ಎಣ್ಣೆ, ಗೋಧಿ ಮೊದಲಾದ ಆಹಾರ ವಸ್ತುಗಳ ಪೂರೈಕೆ ನಿಂತಿದೆ.

ಸುಮಾರು 4-5 ತಿಂಗಳಿಂದ ಈ ಆಹಾರ ವಸ್ತುಗಳು ದೊರಕುತ್ತಿಲ್ಲ. ಬದಲಿಗೆ 1 ಕೆ.ಜಿ. ತೊಗರಿ ಬೇಳೆ ನೀಡಲಾಗುತ್ತಿದೆ. ಬೇಳೆಯಲ್ಲಿ 100-150 ಗ್ರಾಂನಷ್ಟು ಕಸ-ಕಡ್ಡಿಗಳೇ ಇವೆ ಎಂದು ಫಲಾನುಭವಿಗಳು ದೂರುತ್ತಿದ್ದಾರೆ. ಸೀಮೆಎಣ್ಣೆ ಪ್ರಮಾಣವನ್ನು ಕಡಿತಗೊಳಿಸಲಾಗಿದೆ ಮತ್ತು ದರವನ್ನು ಲೀಟರ್‌ಗೆ 25 ರೂ.ಗೆ ಹೆಚ್ಚಿಸಲಾಗಿದೆ ಎಂದು ಸಮಿತಿ ಟೀಕಿಸಿದೆ.

ರಾಜ್ಯ ಸರಕಾರ ರೇಷನ್ ವಿತರಣೆಯಲ್ಲಿ ಆಗುತ್ತಿರುವ ಅವ್ಯವಸ್ಥೆಯನ್ನು ಕೂಡಲೇ ಹೋಗಲಾಡಿಸಬೇಕು. ಸಕ್ಕರೆ, ಎಣ್ಣೆ, ಗೋಧಿ ಮೊದಲಾದ ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಫಲಾನುಭವಿಗಳಿಗೆ ದೊರಕುವಂತೆ ಕೂಡಲೇ ಕ್ರಮ ವಹಿಸಬೇಕೆಂದು ಸಿಪಿಎಂ ಒತ್ತಾಯಿಸುತ್ತದೆ ಎಂದು ಸಮಿತಿಯ ಕಾರ್ಯದಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News