×
Ad

ಡಿಸಿ ಭರವಸೆ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ಕೈಬಿಟ್ಟ ಬಿಜೆಪಿ

Update: 2017-08-30 23:29 IST

ಉಡುಪಿ, ಆ.30: ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ಆರಂಭಿಸಬೇಕು ಮತ್ತು ದಶಕಗಳಿಂದ ಸಾಂಪ್ರದಾಯಿಕ ಮರಳುಗಾರಿಕೆ ಮಾಡುತ್ತಿದ್ದ ಎಲ್ಲರಿಗೂ ಅವಕಾಶ ನೀಡಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ, ಮಂಗಳವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಇಂದಿನಿಂದ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯನ್ನು ಜಿಲ್ಲಾಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಕೈಬಿಡಲಾಯಿತು.

ಕ್ಲಾಕ್ ಟವರ್ ಎದುರು ಆರಂಭಗೊಂಡ ಧರಣಿಯನ್ನುದ್ದೇಶಿಸಿ ಮಾತ ನಾಡಿದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕರಾವಳಿಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸರಕಾರ ವಿಫಲವಾಗಿದ್ದು, ಕರಾವಳಿಯ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಮಾಡದೆ ಮೂರು ಜಿಲ್ಲೆಗಳಲ್ಲಿಯೂ ಸಮಾನ ನೀತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

 ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿದರು. ಬಳಿಕ ಧರಣಿ ನಿರತರು ಅಲ್ಲಿಂದ ಮಣಿಪಾಲದಲ್ಲಿ ರುವ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ಅಲ್ಲಿ ಧರಣಿ ನಡೆಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಅಲ್ಲೇ ಕುಣಿದು ಕುಪ್ಪಳಿಸಿದ ಧರಣಿ ನಿರತರು ಭಜನೆಗಳನ್ನು ಹಾಡಿದರು.

ಈ ವೇಳೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಿಜೆಪಿ ಮುಖಂಡರನ್ನು ಛೇಂಬರ್‌ಗೆ ಕರೆದು ಮಾತು ಕತೆ ನಡೆಸಿದರು. ಮರಳುಗಾರಿಕೆಗೆ ಅರ್ಜಿ ಸಲ್ಲಿಸಿದ ಎಲ್ಲ 168 ಮಂದಿಗೂ ಮರಳುಗಾರಿಕೆ ನಡೆಸಲು ಅವಕಾಶ ನೀಡಬೇಕು. ಅಲ್ಲಿಯವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಬಿಜೆಪಿ ಮುಖಂಡರು ಹೇಳಿದರು.

‘ಅರ್ಜಿ ಸಲ್ಲಿಸಿದ 168 ಮಂದಿಯಲ್ಲಿ 134 ಮಂದಿಗೆ ಈಗಾಗಲೇ ಮರಳು ಗಾರಿಕೆ ನಡೆಸಲು ಪರವಾನಿಗೆ ನೀಡಲಾಗಿದೆ. ಉಳಿದ 34 ಮಂದಿಗೆ ವಿವಿಧ ಕಾರಣಕ್ಕಾಗಿ ಪರವಾನಿಗೆ ನೀಡದೆ ತಡೆ ಹಿಡಿಯಲಾಗಿದೆ. ಇವರಲ್ಲಿ ನಾಲ್ಕು ಮಂದಿಯ ವಿರುದ್ಧ ಕ್ರಿಮಿನಲ್ ಕೇಸ್ ಇರುವುದರಿಂದ ಅವರನ್ನು ಬಿಟ್ಟು ಉಳಿದ 30 ಮಂದಿಗೆ ಪರವಾನಿಗೆ ನೀಡುವ ಕುರಿತು ಸೆ.2ರಂದು ನಡೆಯುವ ಮರಳು ಸಮಿತಿಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಡಿಸಿ ಭರವಸೆ ನೀಡಿದರು.

ಇದಕ್ಕೆ ಒಪ್ಪಿದ ಬಿಜೆಪಿ ಮುಖಂಡರು ಅಹೋರಾತ್ರಿ ಧರಣಿಯನ್ನು ಕೈ ಬಿಟ್ಟರು. ಜಿಲ್ಲಾಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕೈಬಿಡ ಲಾಗಿದೆ. ಸೆ.2ರ ಸಭೆಯಲ್ಲಿ ಈ 30 ಮಂದಿಗೆ ಪರವಾನಿಗೆ ನೀಡದಿದ್ದಲ್ಲಿ ಮತ್ತೆ ಹೋರಾಟ ಮುಂದುವರೆಸಲಾಗುವುದು ಎಂದು ಮಟ್ಟಾರು ರತ್ನಾಕರ ಶೆಟ್ಟಿ ತಿಳಿಸಿದರು.


ಪೆಂಡೋಲ್ ಕಿತ್ತೆಗೆದ ನಗರಸಭೆ ಅಧಿಕಾರಿಗಳು
ಅಹೋರಾತ್ರಿ ಧರಣಿಯ ಹಿನ್ನೆಲೆಯಲ್ಲಿ ಬಿಜೆಪಿಯವರು ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಹಾಕಿದ್ದ ಪೆಂಡೋಲ್‌ನ್ನು ಧರಣಿನಿರತರು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ತೆರಳಿದ್ದ ವೇಳೆ ನಗರಸಭೆ ಅಧಿಕಾರಿಗಳು ಪರವಾನಿಗೆ ಇಲ್ಲ ಎಂಬ ಕಾರಣಕೆ್ಕ ಜೆಸಿಬಿ ಮೂಲಕ ಕಿತ್ತು ತೆಗೆದರು.

ಈ ಸ್ಥಳದಲ್ಲಿ 5:30ರವರೆಗೆ ಮಾತ್ರ ಧರಣಿ ನಡೆಸಲು ಪರವಾನಿಗೆ ನೀಡಿದ್ದು, ಅಲ್ಲದೆ ಶಾಮಿಯಾನ ಹಾಕಲು ಅನುಮತಿ ನೀಡಲಾಗಿದೆಯೇ ಹೊರತು ತಗಡು ಶೀಟುಗಳನ್ನು ಹಾಕಲು ನೀಡಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳ ಆದೇಶ ದಂತೆ ಪೆಂಡೋಲ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಸ್ಥಳದಲ್ಲಿದ್ದ ನಗರ ಸಭಾ ಅಧಿಕಾರಿಗಳು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ನಡೆಸುತ್ತಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಶೆಟ್ಟಿ ಇದಕ್ಕೆ ಪ್ರತಿಕ್ರಿಯಿಸಿ, ನಮಗೆ ಧರಣಿ ನಡೆಸಲು ಸಂಜೆ 6 ಗಂಟೆಯವರೆಗೆ ಅನುಮತಿ ನೀಡಲಾಗಿದೆ. ಆದರೆ ಪೌರಾಯುಕ್ತರು 4:45ಕ್ಕೆ ಪೆಂಡೋಲ್‌ಗಳನ್ನು ತೆರವು ಮಾಡಿದ್ದಾರೆ. ಈ ಬಗ್ಗೆ ನಾಳೆ ನಡೆಯುವ ನಗರ ಸಭೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರಶ್ನಿಸಲಿದ್ದಾರೆ. ಅಲ್ಲದೆ ಈ ಕುರಿತು ಪೌರಾಯುಕ್ತರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತರು ನಗರಸಭೆ ಕಚೇರಿ ಎದುರು ಧರಣಿ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News