ಉಳ್ಳಾಲ ಮದ್ರಸ ಪಠ್ಯ ವಿವಾದ: ಯಥಾಸ್ಥಿತಿ ಕಾಪಾಡಲು ಹೈಕೋರ್ಟ್ ಮಧ್ಯಾಂತರ ಆದೇಶ

Update: 2017-08-31 11:00 GMT

ಮಂಗಳೂರು, ಆ.31: ಉಳ್ಳಾಲ ದರ್ಗಾ ಅಧೀನದ ಮದ್ರಸ ಪಠ್ಯ ವಿವಾದ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಉಳ್ಳಾಲ ನಿವಾಸಿಯೊಬ್ಬರ ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಯಥಾಸ್ಥಿತಿ ಕಾಪಾಡಲು ಮಧ್ಯಾಂತರ ಆದೇಶ ನೀಡಿದೆ.

ಉಳ್ಳಾಲದ ಸೈಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ 2017-18ನೆ ಸಾಲಿನಿಂದ ದರ್ಗಾ ಅಧೀನದ 32 ಮದ್ರಸಗಳ 1ರಿಂದ 10ನೆ ತರಗತಿಗಳಿಗೆ ಪ್ರತ್ಯೇಕ ಪಠ್ಯಪುಸ್ತಕವನ್ನು ಅಳವಡಿಸಿತ್ತು. ಇದನ್ನು ಪ್ರಶ್ನಿಸಿ ಉಳ್ಳಾಲದ ಅಬ್ದುಲ್ ಹಮೀದ್ ಎಂಬವರು ಹೈಕೋರ್ಟ್‌ಗೆ ರಿಟ್ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ಹೈಕೋರ್ಟ್‌ನಲ್ಲಿ ನ್ಯಾಯವಾದಿ ಕೆ.ಎಸ್. ಹರೀಶ್ ವಾದಿಸಿದ್ದರು. ಅದರಂತೆ ಆ.21ರಂದು ನ್ಯಾಯಾಧೀಶ ಎ.ಎಸ್.ಬೋಪಣ್ಣ ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ 2011ರ ಅಕ್ಟೋಬರ್ 10ರಂದು ಸರಕಾರ ಹೊರಡಿಸಿದ ಸುತ್ತೋಲೆಯಂತೆ ಯಥಾಸ್ಥಿತಿ ಕಾಪಾಡಲು ಮಧ್ಯಾಂತರ ಆದೇಶ ನೀಡಿದ್ದಾರೆ. ಅಲ್ಲದೆ ಪ್ರತಿವಾದಿಗಳಾದ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (ಹಜ್ ಮತ್ತು ವಕ್ಫ್), ರಾಜ್ಯ ವಕ್ಫ್ ಬೋರ್ಡ್‌ನ ಮುಖ್ಯ ಕಾರ್ಯದರ್ಶಿ, ದ.ಕ.ಜಿಲ್ಲಾ ವಕ್ಫ್ ಅಧಿಕಾರಿ, ದ.ಕ.ಜಿಲ್ಲಾಧಿಕಾರಿ, ಮಂಗಳೂರು ಸಹಾಯಕ ಆಯುಕ್ತರು, ಉಳ್ಳಾಲ ಸೈಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಿ 10 ದಿನದೊಳಗೆ ಉತ್ತರಿಸಲು ಸೂಚಿಸಿದ್ದಾರೆ.

ವಕೀಲರೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ: ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್‌, "ಹೈಕೋರ್ಟ್‌ನ ನೋಟಿಸ್ ಇನ್ನೂ ನಮ್ಮ ಕೈ ಸೇರಿಲ್ಲ. ನೋಟಿಸ್ ತಲುಪಿದ ಬಳಿಕ ವಕೀಲರ ಜೊತೆ ಸಮಾಲೋಚಿಸಿ ಮುಂದಿನ ಕ್ರಮ ಜರಗಿಸಲಾಗುವುದು" ಎಂದು ತಿಳಿಸಿದ್ದಾರೆ.

"1982ರಿಂದ 2010ರವರೆಗೆ ದರ್ಗಾ ಅಧೀನದ ಎಲ್ಲ ಮದ್ರಸಗಳು ಸೈಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಅಧೀನದ ಪಠ್ಯಪುಸ್ತಕವಿತ್ತು. ಆ ಬಳಿಕ ಬಂದ ಆಡಳಿತ ಸಮಿತಿಯು ಸುನ್ನಿ ಸಮಸ್ತದ ಅಧೀನಕ್ಕೆ ಈ ಮದ್ರಸಗಳನ್ನು ನೋಂದಾಯಿಸಿತ್ತು. ಉಳ್ಳಾಲ ದರ್ಗಾದ ಆಡಳಿತವು ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ವಯಂ ಆಗಿ ನಡೆಸುತ್ತಿದೆ. ಆ ಹಿನ್ನೆಲೆಯಲ್ಲಿ ಹಾಲಿ ಆಡಳಿತ ಸಮಿತಿಯು ದರ್ಗಾ ಅಧೀನದ ಎಲ್ಲ ಮದ್ರಸಗಳನ್ನು ಸುನ್ನಿ ಸಮಸ್ತದ ಬದಲು ಸೈಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್‌ಗೊಳಪಡಿಸಲು ನಿರ್ಧರಿಸಿ ಅದರಂತೆ ಕಾರ್ಯಾಚರಿಸುತ್ತಿದೆ. ಈಗಾಗಲೆ ಹಿರಿಯ ವಿದ್ವಾಂಸರ ಸಲಹೆಯಂತೆ ಪಠ್ಯಪುಸ್ತಕಗಳನ್ನು ರಚಿಸಿ ದರ್ಗಾ ಅಧೀನದ ಮದ್ರಸಗಳಿಗೆ ವಿತರಿಸಲಾಗಿದೆ. 24 ಮದ್ರಸಗಳು ಈ ಪಠ್ಯವನ್ನು ಅಳವಡಿಸಿವೆ. ಕೆಲವರು ಇದನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ಹೋಗಿರಬಹುದು. ಆದರೆ, ನಮಗಿನ್ನೂ ಆ ಬಗ್ಗೆ ಮಾಹಿತಿ ಇಲ್ಲ. ಯಾವುದಕ್ಕೂ ಮುಂದಿನ ನಿರ್ಧಾರಗಳ ಬಗ್ಗೆ ಆಡಳಿತ ಸಮಿತಿಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಹಾಜಿ ಅಬ್ದುಲ್ ರಶೀದ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News