ಮಂಗಳೂರು: ಕೆಂಪೇಗೌಡರ ಜಯಂತಿ ಆಚರಣೆ
ಮಂಗಳೂರು, ಆ.31: ಬೆಂಗಳೂರು ಇಂದು ಜಗತ್ತಿನ ಭೂಪಟದಲ್ಲಿ ಗುರುತಿಸಿಕೊಳ್ಳಲು ಪ್ರಮುಖ ಕಾರಣ ಕೆಂಪೇಗೌಡರು. ಬೆಂಗಳೂರಿನ ಬೆಳವಣಿಗೆಯ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಶ್ರೇಷ್ಠ ಚಿಂತಕ ಕೆಂಪೇಗೌಡರ ಜಯಂತಿ ಆಚರಣೆಯು ಅರ್ಥಪೂರ್ಣ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಗುರುವಾರ ನಗರದ ಹಂಪನ್‌ಕಟ್ಟೆಯ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೇಂಪೇಗೌಡರು ಬೆಂಗಳೂರಿನ ಸಾಮಾಜಿಕ ಪರಿಸ್ಥಿತಿ, ವೈಜ್ಞಾನಿಕ, ಭೌಗೋಳಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ಅಧ್ಯಯನ ಮಾಡಿ ನಗರ ಕಟ್ಟುವ ತೀರ್ಮಾನಕ್ಕೆ ಬಂದರು. ನೀರಿನ ಪೂರೈಕೆಗಾಗಿ ಸಾವಿರಾರು ಕೆರೆಗಳನ್ನು ನಿರ್ಮಿಸಿದ್ದರು ಎಂದು ನುಡಿದರು.
ಜಯಂತಿ ಸಂದೇಶ ನೀಡಿದ ಉರ್ವ ಕೆನರಾ ಪ್ರೌಢಶಾಲೆಯ ಶಿಕ್ಷಕ ರವೀಂದ್ರನಾಥ ಶೆಟ್ಟಿ ರಾಜ್ಯದಲ್ಲಿ ಕೆಂಪೇಗೌಡರಿಗೆ ಸಿಗಬೇಕಾದ ಮಾನ್ಯತೆ ಇನ್ನೂ ಸಿಕ್ಕಿಲ್ಲ. ಅವರ ಕುರಿತು ಅಧ್ಯಯನ ಬೇಕಾದ ಆಕರ ಗ್ರಂಥಗಳಿಲ್ಲ, ಪ್ರಾಥಮಿಕದಿಂದ ಪದವಿವರೆಗಿನ ಪಠ್ಯಪುಸ್ತಕಗಳಲ್ಲಿಯೂ ಅವರ ಕುರಿತ ಪಠ್ಯಗಳಿಲ್ಲ. ಕೆಂಪೇಗೌಡರ ಕುರಿತು ಮಾಹಿತಿ ಸಂಗ್ರಹಿಸಲು ತೊಡಗಿದಾಗ ಅವರು ಬೆಂಗಳೂರು ನಿರ್ಮಾತೃ ಎಂಬುದು ಬಿಟ್ಟರೆ ಬೇರೆ ಯಾವುದೇ ಉತ್ತರ ಸಿಗುವುದಿಲ್ಲ. ಈ ರೀತಿ ಇತಿಹಾಸ ಮರೆತರ ಸಮಾಜ ಬೆಳೆಯಲು ಸಾಧ್ಯವಿಲ್ಲ ಎಂದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎಚ್.ದಿವಾಕರ ಶೆಟ್ಟಿ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಪೊಲೀಸ್ ಅಧಿಕಾರಿ ಮಂಜುಳಾ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಚಂದ್ರಹಾಸ ರೈ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.