ಉಡುಪಿ ನಗರಸಭೆ: ಬಿಜೆಪಿ ಸದಸ್ಯರ ವಿರುದ್ಧ ಜಿಲ್ಲಾಧಿಕಾರಿಗೆ ದೂರು
ಉಡುಪಿ, ಆ.31: ಉಡುಪಿ ನಗರಸಭೆಯ ಸಾಮಾನ್ಯ ಸಭೆ ನಡೆಸಲು ವಿರೋಧ ಪಕ್ಷ(ಬಿಜೆಪಿ) ಸದಸ್ಯರು ಅಡ್ಡಿ ಪಡಿಸುತ್ತಿರುವ ಕುರಿತು ನಗರ ಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮುಂದಾಳತ್ವದಲ್ಲಿ ಆಡಳಿತ ಪಕ್ಷದ ಸದಸ್ಯರು ಇಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಉಡುಪಿ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಸದಸ್ಯರುಗಳೇ ಆಗಿದ್ದು, ಇತ್ತೀಚಿಗೆ ವಿರೋಧ ಪಕ್ಷವಾದ ಬಿಜೆಪಿಯವರು ನಿರಂತರವಾಗಿ ಬೇಸರ ಹಾಗೂ ನೋವು ಉಂಟು ಮಾಡುವ ಕೆಲಸ ವನ್ನು ಮಾಡುತ್ತಿದ್ದಾರೆ. ನಗರಸಭೆಯ ಎಲ್ಲ 35 ವಾರ್ಡ್‌ಗಳ ಅಭಿವೃದ್ಧಿಗೆ ಆಡಳಿತ ಪಕ್ಷ ನಿರಂತವಾಗಿ ಶ್ರಮಿಸುತ್ತಿದ್ದು, ಇದನ್ನು ಸಹಿಸದ ಬಿಜೆಪಿ ಸದಸ್ಯರು ಕಳೆದ ನಾಲ್ಕೈದು ತಿಂಗಳುಗಳಿಂದ ಸಭೆಯನ್ನು ಸುಸೂತ್ರವಾಗಿ ನಡೆಸಲು ಬಿಡದೆ ವ್ಯಕ್ತಿಗತವಾಗಿ ವೃತಾರೋಪ ಮಾಡುವುದು, ಅಧ್ಯಕ್ಷರು, ಉಪಾಧ್ಯಕ್ಷರನ್ನು ಹೀನಾಯಿಸಿ ಮಾತನಾಡುವುದು, ಮಹಿಳೆಯರು ಎಂದು ಪರಿಗಣಿಸದೆ ಬಾಯಿಗೆ ಬಂದಂತೆ ಮಾತನಾಡುವ ಮೂಲಕ ಸಭೆಗೆ ಅಗೌರವ ತೋರಿಸುತ್ತಿದ್ದಾರೆ. ಅಸಂವಿಧಾನಿಕ ಪದವನ್ನು ಬಳಸಿ ಏರು ಧ್ವನಿಯಲ್ಲಿ ಮಾತನಾಡುವ ಮೂಲಕ ಸಭೆಯ ಘನತೆಗೆ ಕುಂದು ತರುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಅಭಿವೃದ್ದಿ ಕುರಿತು ಪ್ರಸ್ತಾವಿಕವಾಗಿ ಮಾತನಾಡುವಾಗ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಅಡ್ಡಿ ಪಡಿಸಿದ್ದು, ಸದಸ್ಯರಾದ ಯಶ್‌ಪಾಲ್ ಸುವರ್ಣ ಹಾಗೂ ಮಹೇಶ್ ಠಾಕೂರ್ ಅಧ್ಯಕ್ಷರ ಕೈಯಿಂದ ಮೈಕನ್ನು ಕಿತ್ತುಕೊಂಡು, ಪೌರಾಯುಕ್ತರ ಕೈ ಯಲ್ಲಿದ್ದ ಸಭೆಯ ಕಾರ್ಯಸೂಚಿ ಎಳೆದುಕೊಂಡು ಅಧ್ಯಕ್ಷರು ಮತ್ತು ಸಭೆಯ ಘನತೆಗೆ ಅಗೌರವ ತೋರಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷ ಸಂಧ್ಯಾ ತಿಲಕ್‌ರಾಜ್, ಸದಸ್ಯರಾದ ಯುವರಾಜ್, ರಮೇಶ್ ಕಾಂಚನ್, ಚಂದ್ರ ಕಾಂತ್, ಸೆಲಿನ ಕರ್ಕಡ, ಶೋಭಾ, ಜನಾರ್ದನ ಭಂಡಾರ್ಕರ್ ಮೊದಲಾದವರು ಉಪಸ್ಥಿತರಿದ್ದರು.