×
Ad

ದ.ಕ.: ಆಧಾರ್ ತಿದ್ದುಪಡಿಗೆ ಅಂಚೆ ಕಚೇರಿಗಳಲ್ಲೂ ಅವಕಾಶ

Update: 2017-08-31 18:08 IST

ಮಂಗಳೂರು, ಆ.31: ಆಧಾರ್ ಕಾರ್ಡ್‌ಗಳಲ್ಲಿರುವ ದೋಷಗಳನ್ನು ಸರಿಪಡಿಸಲು ಅಂಚೆ ಕಚೇರಿಗಳಲ್ಲೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ತಿಳಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಂಚೆ ಹಾಗೂ ಬಿಎಸ್ಸೆನ್ನೆಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಮಾಹಿತಿ ನೀಡಿದರು. ಪ್ರಸ್ತುತ ಸರಕಾರದ ವಿವಿಧ ಯೋಜನೆಗಳಿಗೆ ಆಧಾರ್ ಲಿಂಕಿಂಗ್ ಸಂದರ್ಭ ಆಧಾರ್ ಕಾರ್ಡ್‌ನಲ್ಲಿ ಮಾಹಿತಿ ತಾಳೆ ಹೊಂದಿರುವುದರಿಂದ ಆಧಾರ್ ತಿದ್ದುಪಡಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 23 ಅಂಚೆ ಕಚೇರಿಗಳಲ್ಲಿ ಆಧಾರ್ ತಪ್ಪುಗಳನ್ನು ಸರಿಪಡಿಸಲು ಕೇಂದ್ರ ತೆರೆಯಲು ಅಂಚೆ ಇಲಾಖೆ ಅನುಮತಿಸಿದೆ. ಈ ಪೈಕಿ ಈಗಾಗಲೇ ಮಂಗಳೂರು ವಿಭಾಗದ 15 ಅಂಚೆ ಕಚೇರಿಗಳಲ್ಲಿ ಕಾರ್ಯಾರಂಭವಾಗಿದೆ. ಅಗತ್ಯ ಪರಿಕರಗಳು ಹಾಗೂ ತಾಂತ್ರಿಕ ವ್ಯವಸ್ಥೆ ಒದಗಿದ ನಂತರ ಉಳಿದ ಅಂಚೆ ಕಚೇರಿಗಳಲ್ಲೂ ಆಧಾರ್ ತಿದ್ದುಪಡಿ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
   ಆಧಾರ್ ತಿದ್ದುಪಡಿ ಸಂದರ್ಭ ತ್ವರಿತವಾಗಿ ಪ್ರಕ್ರಿಯೆ ಪೂರೈಸಲು ಆಧಾರ್ ಕೇಂದ್ರಗಳಿಗೆ ಹಾಗೂ ತಿದ್ದುಪಡಿ ಮಾಡುವ ಅಂಚೆ ಕೇಂದ್ರಗಳಿಗೆ ಹೈಸ್ಪೀಡ್ ಇಂಟರ್‌ನೆಟ್ ಸೌಲಭ್ಯವನ್ನು ಒದಗಿಸಲು ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕೆ ಬಿಎಸ್ಸೆನ್ನೆಲ್ ಒಪ್ಪಿಕೊಂಡಿವೆ. ನೂತನ ಆಧಾರ್ ಕಾರ್ಡ್ ಹಾಗೂ ತಿದ್ದುಪಡಿಗೆ ಜಿಲ್ಲಾಡಳಿತ ಅಗತ್ಯ ವ್ಯವಸ್ಥೆ ಕಲ್ಪಿಸುತ್ತಿದ್ದು, ಸಾರ್ವಜನಿಕರು ನಿಗದಿತ ಅಂಚೆ ಕಚೇರಿಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗಳನ್ನು ಸರಿಪಡಿಸಬಹುದು ಎಂದು ಡಾ.ಕೆ.ಜಿ. ಜಗದೀಶ್ ತಿಳಿಸಿದರು.

 *ಆಧಾರ್ ತಿದ್ದುಪಡಿಗೆ ಅಂಚೆ ಕಚೇರಿಗಳ ವಿವರ:

ಮಂಗಳೂರು ಪ್ರಧಾನ ಅಂಚೆ ಕಚೇರಿ ಪಾಂಡೇಶ್ವರ, ಹಂಪನಕಟ್ಟೆ, ಬಲ್ಮಠ, ಕಂಕನಾಡಿ, ಕೊಡಿಯಾಲ್‌ಬೈಲ್, ಬಿಜೈ, ಕೊಂಚಾಡಿ, ಕುಲಶೇಖರ, ಅಶೋಕನಗರ, ಪಣಂಬೂರು, ಸುರತ್ಕಲ್, ಕಾಟಿಪಳ್ಳ, ಮುಲ್ಕಿ, ಕಿನ್ನಿಗೋಳಿ, ಬಜ್ಪೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News