×
Ad

‘ಮೆಟ್ರೋ’ದ ಕೋಚ್ ನಿರ್ಮಾಣದ ಗುತ್ತಿಗೆ ರದ್ದತಿಗೆ ಆಗ್ರಹಿಸಿ ಮನವಿ

Update: 2017-08-31 18:23 IST

ಪುತ್ತೂರು, ಆ. 31: ಚೀನಾದ ಕಂಪನಿಗೆ ನೀಡಿರುವ ನಾಗಪುರ 'ಮೆಟ್ರೋ'ದ ಕೋಚ್ ನಿರ್ಮಾಣದ ಗುತ್ತಿಗೆಯನ್ನು ತಕ್ಷಣ ರದ್ದುಗೊಳಿಸಬೇಕು ಹಾಗೂ ದೇಶದಲ್ಲಿ ನಡೆಯುತ್ತಿರುವ ಹಿಂದೂ ನೇತಾರರ ಹತ್ಯೆಗಳ ತನಿಖೆಯನ್ನು 'ಕೇಂದ್ರೀಯ ತನಿಖಾ ದಳ'ಕ್ಕೆ ವಹಿಸಿಕೊಡಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ವೇದಿಕೆಯ ವತಿಯಿಂದ ಗುರುವಾರ ಪುತ್ತೂರು ತಹಶೀಲ್ದಾರ್ ಕಚೇರಿಯ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ವ್ಯಾಪಾರವನ್ನು ಸಕ್ಷಮಗೊಳಿಸುವ ಉದ್ದೇಶದಿಂದ 'ಮೇಕ್ ಇನ್ ಇಂಡಿಯಾ' 'ಸ್ಕಿಲ್ ಇಂಡಿಯಾ'ದಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ ಉತ್ಪಾದಿಸುವ ಹಾಗೂ ಸ್ವದೇಶಿ ತಂತ್ರಜ್ಞಾನವನ್ನು ವಿಕಾಸಗೊಳಿಸುವಂತಹ ತತ್ವಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ನಾಗಪುರ ಮೆಟ್ರೋದ 69 ಕೋಚ್‌ಗಳ ರೂ. 851 ಕೋಟಿಯ ಗುತ್ತಿಗೆಯನ್ನು ಚೀನೀ ಕಂಪನಿಗೆ ಕೊಡಲಾಗಿದೆ. ಚೀನಾ ನಿರಂತರವಾಗಿ ಭಾರತಕ್ಕೆ ಬೆದರಿಕೆಯನ್ನೊಡ್ಡುತ್ತಿದ್ದು, ಇಂತಹ ಸ್ಥಿತಿಯಲ್ಲಿ ಚೀನಾಕ್ಕೆ ಹೊಸ ವ್ಯಾಪಾರವನ್ನು ಆರಂಭಿಸಲು ಅವಕಾಶವನ್ನು ನೀಡುವುದು ಆಘಾತಕಾರಿಯಾಗಿದೆ ಎಂದು ಮನವಿಯಲ್ಲಿ ತಿಳಿಸಿರುವ ಅವರು ಚೀನಾದ ಇಂತಹ ಉದ್ಧಟತನಕ್ಕೆ ಪ್ರತ್ಯುತ್ತರ ನೀಡಲು ಭಾರತ ಸರ್ಕಾರ 'ಚೀನೀ ಉತ್ಪಾದನೆಗಳಿಗೆ ಬಹಿಷ್ಕಾರ ಹಾಗೂ ಸ್ವದೇಶಿಗೆ ಪ್ರೋತ್ಸಾಹ' ಎಂಬ ನೀತಿಯನ್ನು ಸ್ವೀಕರಿಸಬೇಕು ಹಾಗೂ ನಾಗಪುರದಲ್ಲಿ 'ಮೆಟ್ರೋ' ದ ಕೋಚ್ ನಿರ್ಮಾಣದ ಗುತ್ತಿಗೆಯನ್ನು ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಜನಾರ್ಧನ್, ಮಾಧವ ಎಸ್ ರೈ ಕುಂಬ್ರ, ರಮೇಶ್, ದಯಾನಂದ, ಚಂದ್ರಶೇಖರ, ಅಶ್ವತ್ಥ್, ವಂದನಾ, ಮಮತಾ, ಕೇಶವ ಗೌಡ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News