ನರೋಡ ಪಾಟಿಯಾ ದೊಂಬಿ ಪ್ರಕರಣ: ತೀರ್ಪು ಕಾದಿರಿಸಿದ ಗುಜರಾತ್ ಹೈಕೋರ್ಟ್

Update: 2017-08-31 14:28 GMT

ಅಹ್ಮದಾಬಾದ್, ಆ.31: ಗೋಧ್ರಾ ಘಟನೆಯ ಬಳಿಕ ನಡೆದ ಕೋಮು ಹಿಂಸಾಚಾರದ ಪ್ರಕರಣಗಳಲ್ಲಿ ಒಂದಾಗಿರುವ 97 ಮಂದಿ ಬಲಿಯಾಗಿರುವ ನರೋಡ ಪಾಟಿಯಾ ದೊಂಬಿ ಪ್ರಕರಣದಲ್ಲಿ ದೋಷಿಗಳಾದ 32 ಮಂದಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಗುಜರಾತ್ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಅಪರಾಧಿಗಳಲ್ಲಿ ಬಿಜೆಪಿ ಮುಖಂಡೆ ಹಾಗೂ ಮಾಜಿ ಸಚಿವೆ ಮಾಯಾ ಕೊಡ್ನಾನಿ ಸೇರಿದ್ದಾರೆ.

ಎಲ್ಲಾ ಅಪರಾಧಿಗಳು ದೋಷ ನಿರ್ಣಯದ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದರೆ, ವಿಶೇಷ ತನಿಖಾ ಸಮಿತಿ(ಸಿಟ್), ಅಪರಾಧಿಗಳಲ್ಲಿ ಮೂವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಹೆಚ್ಚಿಸಬೇಕು ಎಂದು ಮನವಿ ಸಲ್ಲಿಸಿದೆ. ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿರುವ ಬಜರಂಗದಳದ ಮಾಜಿ ಮುಖಂಡ ಬಾಬು ಬಜ್ರಂಗಿಗೆ ಶಿಕ್ಷೆ ಮಾಫಿಮಾಡುವ ಅವಕಾಶ ಇರುವ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. ಆದರೆ ಈತನ ಶಿಕ್ಷೆ ಮಾಫಿ ಮಾಡಬಾರದು ಎಂದು ಸಿಟ್ ಕೋರಿಕೆ ಸಲ್ಲಿಸಿದೆ.

 ಅಲ್ಲದೆ ಸೋದರಿಯರಾದ ರಮೀಳ ಮತ್ತು ಗೀತಾ ರಾಥೋಡ್ ಸೇರಿದಂತೆ 7 ಆರೋಪಿಗಳನ್ನು ದೋಷಮುಕ್ತಿಗೊಳಿಸಿರುವುದನ್ನೂ ‘ಸಿಟ್’ ವಿರೋಧಿಸಿದೆ. ಇವರ ಸೋದರ ಮುಕೇಶ್ ರಾಥೋಡ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು ಈತ ಕೂಡಾ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದಾನೆ. ಈ ಮೂವರ ತಂದೆ ರತಿಲಾಲ್ ರಾಥೋಡ್ ಕೂಡಾ ಆರೋಪಿಯಾಗಿದ್ದು ಈತ ವಿಚಾರಣೆ ಸಂದರ್ಭ ಮೃತಪಟ್ಟಿದ್ದ. ದೋಷಿಗಳನ್ನು ಬಿಡುಗಡೆಗೊಳಿಸುವುದನ್ನು ಹಿಂಸಾಚಾರದ ಸಂತ್ರಸ್ತರು ವಿರೋಧಿಸಿದ್ದಾರೆ.

 ಪ್ರಕರಣದ ತನಿಖೆಯನ್ನು ಸೂಕ್ತವಾಗಿ ನಡೆಸಿಲ್ಲ ಎಂದು ಸಿಟ್ ಅನ್ನು ನ್ಯಾಯಾಲಯ ತೀವ್ರವಾಗಿ ತರಾಟೆಗೆತ್ತಿಕೊಂಡಿದೆ.ಅವಮಾನಕರ ರೀತಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News