×
Ad

ಉಡುಪಿ: ಸೆ.2ರಿಂದ ಜಿಲ್ಲಾ ಮಟ್ಟದ ಬೀದಿ ನಾಟಕ ಸ್ಪರ್ಧೆ

Update: 2017-08-31 20:16 IST

ಉಡುಪಿ, ಆ.31: ಉಡುಪಿಯ ಸಂವೇದನಾ ಫೌಂಡೇಷನ್, ಕಿದಿಯೂರು ಉದಯಕುಮಾರ್ ಫ್ಯಾಮಿಲಿ ಟ್ರಸ್ಟ್‌ನ ಸಹಯೋಗದೊಂದಿಗೆ ಸೆ.2 ಮತ್ತು 3ರಂದು ಉಡುಪಿ ಜಿಲ್ಲಾ ಮಟ್ಟದ ಅಂತರ ಕಾಲೇಜು ಬೀದಿ ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಪ್ರವರ್ತಕ ಕಿದಿಯೂರು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಗುರುವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲೆಯ 35 ಕಾಲೇಜು ತಂಡಗಳು ಈಗಾಗಲೇ ಹೆಸರು ನೊಂದಾಯಿಸಿಕೊಂಡಿವೆ ಎಂದರು.

ಭಾಗವಹಿಸುವ ತಂಡಗಳಿಗೆ ಮೂರು ವಿಷಯಗಳನ್ನು ನೀಡಲಾಗಿದ್ದು, ಅವುಗಳ ಕುರಿತಂತೆ ಈ ನಾಟಕಗಳನ್ನು ಆಡಬೇಕಾಗಿದೆ. ಚೀನಾ ವಸ್ತುಗಳ ಬಳಕೆ... ಭಾರತದ ಆರ್ಥಿಕತೆಗೆ ಸಾವಿನ ಕುಣಿಕೆ, ನಮಗೆ ಇರುವುದೊಂದೇ ಭೂಮಿ ಉಳಿಸಿಕೊಳ್ಳಲು ನಮಗೆ ಕೊನೆಯ ಅವಕಾಶ ಹಾಗೂ ಡ್ರಗ್ಸ್ ಕಪಿಮುಷ್ಠಿ ಯಲ್ಲಿ ಕಾಲೇಜು ಮುಷ್ಠಿ ಬಿಡಿಸುವ ಎದೆಗಾರಿಕೆ ಬೇಡವೇ? ಇವು ಸ್ಪರ್ಧೆಗೆ ವಿಷಯಗಳಾಗಿವೆ.

ಪ್ರತಿ ಕಾಲೇಜಿನಿಂದ ಎರಡು ತಂಡಗಳಿಗೆ ಅವಕಾಶವಿದ್ದು, ಪ್ರತಿ ತಂಡಕ್ಕೆ ಗರಿಷ್ಠ 20 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ತಂಡದಲ್ಲಿ ಕನಿಷ್ಠ ಐದು ಮಂದಿ ಇರಬೇಕು. ಸ್ಪರ್ಧೆಯಲ್ಲಿ ವಿಜೇತವಾದ ಮೊದಲ ಮೂರು ತಂಡಗಳಿಗೆ ಕ್ರಮವಾಗಿ 7,000ರೂ., 5,000ರೂ. ಹಾಗೂ 3,000ರೂ. ನಗದು ಬಹುಮಾನ ನೀಡಲಾಗುವುದು ಎಂದು ಉದಯಕುಮಾರ್ ಶೆಟ್ಟಿ ತಿಳಿಸಿದರು.

ಸ್ಪರ್ಧೆಯಲ್ಲಿ ಸೆ.2ರ ಬೆಳಗ್ಗೆ 9:30ಕ್ಕೆ ಉದ್ಯಮಿ ಡಾ.ಜಿ.ಶಂಕರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ.ಪಾಟೀಲ್, ಎಂಐಟಿಯ ಪ್ರಾಧ್ಯಾಪಕ ಡಾ.ನಾರಾಯಣ ಶೆಣೈ ಹಾಗೂ ಉದಯಕುಮಾರ್ ಶೆಟ್ಟಿ ಉಪಸ್ಥಿತರಿರುವರು.

ಸುದ್ದಿಗೋಷ್ಠಿಯಲ್ಲಿ ಸಂವೇದನಾ ಫೌಂಡೇಷನ್‌ನ ಅಧ್ಯಕ್ಷ ಪ್ರಕಾಶ್ ಮಲ್ಪೆ, ಉಪಾಧ್ಯಕ್ಷರಾದ ರವಿ ಆಚಾರ್ಯ ತೆಂಕನಿಡಿಯೂರು, ವಿಜಯಕುಮಾರ್ ಕಂಚಿಕಾನ್, ಗುರುಕಾರ್ತಿಕ್ ಶೆಟ್ಟಿ ಉಪ್ಪುಂದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News