ಸಂಪುಟ ಪುನರ್ ರಚನೆ ವದಂತಿಗಳಿಗೆ ಪುಷ್ಟಿ ನೀಡಿದ ಜೇಟ್ಲಿ ಉತ್ತರ, ಎಂಟು ಸಚಿವರೊಂದಿಗಿನ ಶಾ ಸಭೆ

Update: 2017-08-31 15:13 GMT

ಹೊಸದಿಲ್ಲಿ,ಆ.31: ಯಾವುದೇ ಸಮಯದಲ್ಲಿಯೂ ಕೇಂದ್ರ ಸಂಪುಟ ಪುನರ್ ರಚನೆಯ ವದಂತಿಗಳ ನಡುವೆಯೇ ಗುರುವಾರ ಇಲ್ಲಿ, ನೀವು ಇನ್ನೆಷ್ಟು ಕಾಲ ರಕ್ಷಣಾ ಸಚಿವರಾಗಿ ಮುಂದುವರಿಯಲಿದ್ದೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ವಿತ್ತಸಚಿವ ಅರುಣ್ ಜೇಟ್ಲಿ ಅವರು ಮುಸಿನಗುತ್ತ ‘ತುಂಬ ಹೆಚ್ಚು ಕಾಲವಲ್ಲ ಎಂದು ಕನಿಷ್ಠ ನಾನು ಆಶಿಸಿದ್ದೇನೆ’ ಎಂದು ಉತ್ತರಿಸುವ ಮೂಲಕ ವದಂತಿಗಳಿಗೆ ಪುಷ್ಟಿ ನೀಡಿದರು.

   ರಕ್ಷಣಾ ಸಚಿವರಾಗಿದ್ದ ಮನೋಹರ ಪಾರಿಕ್ಕರ್ ಅವರು ಗೋವಾ ಮುಖ್ಯಮಂತ್ರಿ ಯಾಗಿ ತೆರಳಿದ ಬಳಿಕ ಆ ಖಾತೆಯೂ ಜೇಟ್ಲಿ ಹೆಗಲೇರಿದೆ. ವಾರ್ಷಿಕ ರಕ್ಷಣಾ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲು ಮುಂದಿನ ತಿಂಗಳು ಜಪಾನ್‌ಗೆ ತೆರಳುವ ಮುನ್ನ ಅವರು ಎರಡು ಸಚಿವಾಲಯಗಳ ಪೈಕಿ ಒಂದರ ಜವಾಬ್ದಾರಿಯನ್ನು ಕಳಚಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

2019ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಸಂಭಾವ್ಯ ಅಂತಿಮ ಸಂಪುಟ ಪುನರ್‌ರಚನೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಚೀನಾಕ್ಕೆ ತೆರಳುವ ಮುನ್ನ ನಡೆಯುವ ನಿರೀಕ್ಷೆಯಿದೆ. ಕಳೆದ ಕೆಲವು ದಿನಗಳಿಂದ ಹಲವಾರು ಸಭೆಗಳನ್ನು ನಡೆಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗುರುವಾರ ಜೇಟ್ಲಿ ಸೇರಿದಂತೆ ಎಂಟು ಸಚಿವರೊಂದಿಗೆ ಸಭೆಯೊಂದನ್ನು ನಡೆಸಿದರು.

ಗುಜರಾತ್ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಈ ಸಭೆಯು ನಡೆದಿದ್ದು, ಬೇರೆ ಯಾವುದೇ ವಿಷಯದ ಬಗ್ಗೆ ಚರ್ಚೆಯಾಗಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಇತ್ತೀಚಿನ ಸರಣಿ ಅಪಘಾತಗಳ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯದಲ್ಲಿ ಬದಲಾವಣೆ ಯಾಗಬಹುದು ಎಂದು ಹೆಚ್ಚಿನವರು ನಿರೀಕ್ಷಿಸಿದ್ದಾರೆ.

ತೆರವಾಗಿರುವ ಸ್ಥಾನಗಳು ಮತ್ತು ಮೈತ್ರಿಗಳಲ್ಲಿ ಬದಲಾವಣೆಗಳ ಹಿನ್ನೆಲೆಯಲ್ಲಿ ತಿಂಗಳುಗಳ ಹಿಂದೆಯೇ ಸಂಪುಟ ಪುನರ್‌ರಚನೆ ನಡೆಯಬೇಕಾಗಿದ್ದರೂ ಈವರೆಗೂ ಅದು ಕೈಗೂಡಿಲ್ಲ. ಆಡಳಿತ ಬಿಜೆಪಿಯು ಈ ವರ್ಷ ಗುಜರಾತ್ ವಿಧಾನಸಭಾ ಚುನಾವಣೆಯ ಮೆಲೆ ಕಣ್ಣಿರಿಸಿರುವುದರಿಂದ ಗುಜರಾತ್‌ನಲ್ಲಿ ಪಕ್ಷದ ಉಸ್ತುವಾರಿ ಯಾಗಿರುವ ಭೂಪೇಂದ್ರ ಯಾದವರಂತಹ ನಾಯಕರಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಬಹುದು.

 ಎಂ.ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾದ ಬಳಿಕ ಎರಡು ಖಾತೆಗಳು ತೆರವುಗೊಂಡಿದ್ದು, ಅವುಗಳನ್ನು ಮರುಹಂಚಿಕೆ ಮಾಡಲಾಗಿದೆ. ಪರಿಸರ ಖಾತೆಯನ್ನು ನಿರ್ವಹಿಸುತ್ತಿದ್ದ ಸಚಿವ ಅನಿಲ ದವೆಯವರ ನಿಧನದ ನಂತರ ಅದನ್ನು ಅರಣ್ಯ ಖಾತೆಯ ಜೊತೆಗೆ ಹೆಚ್ಚುವರಿ ಖಾತೆಯನ್ನಾಗಿಸಲಾಗಿದೆ.

  ಕಳೆದ ಜುಲೈನಲ್ಲಿ ಬಿಹಾರದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗಿನ ಮೈತ್ರಿಯನ್ನು ಮುರಿದುಕೊಂಡು ಬಿಜೆಪಿಯೊಂದಿಗೆ ಸೇರಿ ರಾಜ್ಯದಲ್ಲಿ ಅಧಿಕಾರ ಹಂಚಿಕೊಂಡಿದ್ದಕ್ಕಾಗಿ ನಿತೀಶ ಕುಮಾರ್ ಅವರ ಜೆಡಿಯುಗೂ ಕೇಂದ್ರವು ಸಚಿವ ಸ್ಥಾನಗಳ ಪುರಸ್ಕಾರ ನೀಡಲಿದೆ ಎಂಬ ವ್ಯಾಪಕ ನಿರೀಕ್ಷೆಗಳಿವೆ.

  ಎನ್‌ಸಿಪಿ ಮೋದಿ ಸರಕಾರವನ್ನು ಸೇರಲಿದೆ ಎಂಬ ವರದಿಗಳನ್ನು ಆ ಪಕ್ಷದ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ನಿರಾಕರಿಸಿದ್ದಾರೆ. ಆದರೆ ಶರದ್ ಪವಾರ್ ನಾಯಕತ್ವದ ಈ ಪಕ್ಷವು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷದಿಂದ ಕಳಚಿಕೊಳ್ಳುವ ಸಂಕೇತಗಳನ್ನು ತೋರಿಸುತ್ತಿರುವುದರಿಂದ ಪಟೇಲ್ ಅವರ ಈ ಸ್ಪಷ್ಟೀಕರಣವನ್ನು ಹೆಚ್ಚಿನವರು ನಂಬುತ್ತಿಲ್ಲ. ಕಾಂಗ್ರೆಸ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಈ ತಿಂಗಳ ಆರಂಭದಲ್ಲಿ ಕರೆದಿದ್ದ ಪ್ರತಿಪಕ್ಷ ಸಭೆಯಲ್ಲಿ ಎನ್‌ಸಿಪಿ ಭಾಗವಹಿಸಿರಲಿಲ್ಲ. ಇತ್ತೀಚಿಗೆ ಗುಜರಾತ್‌ನಲ್ಲಿ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ತಾನು ಕಾಂಗ್ರೆಸ್‌ಗೆ ವಂಚಿಸಿದ್ದೇನೆ ಎಂಬ ಆ ಪಕ್ಷದ ಆರೋಪದಿಂದ ಪವಾರ್ ಅಸಮಾಧಾನಗೊಂಡಿದ್ದಾರೆ ಎಂಬ ಊಹಾಪೋಹಗಳು ದಟ್ಟವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News