ನೋಟು ಅಮಾನ್ಯದ ಫಲಿತಾಂಶ ನಿರೀಕ್ಷೆಯಂತಿದೆ: ಜೇಟ್ಲಿ

Update: 2017-08-31 14:58 GMT

ಹೊಸದಿಲ್ಲಿ,ಆ.31: ನೋಟು ಅಮಾನ್ಯ ಕ್ರಮವು ನಿರೀಕ್ಷೆಯಂತೆಯೇ ಫಲಿತಾಂಶವನ್ನು ನೀಡಿದೆ ಮತ್ತು ಇದರಿಂದ ಮಧ್ಯಮ ಮತ್ತು ಸುದೀರ್ಘಾವಧಿಗಳಲ್ಲಿ ಆರ್ಥಿಕತೆಗೆ ಲಾಭವಾಗಲಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಇಲ್ಲಿ ತಿಳಿಸಿದರು.

ಬ್ಯಾಂಕ್‌ಗಳಲಿ ಹಣ ಠೇವಣಿಯಾಗಿದೆ ಎಂಬ ಮಾತ್ರಕ್ಕೆ ಅದೆಲ್ಲವೂ ಕಾನೂನುಬದ್ಧ ಹಣವೆಂದು ಅರ್ಥವಲ್ಲ ಎಂದು ಅವರು ಹೇಳಿದರು. ಕಳೆದ ವರ್ಷದ ನ.8ರಂದು ನಿಷೇಧಿಸಲಾಗಿದ್ದ 500 ಮತ್ತು 1000 ರೂ.ಮುಖಬೆಲೆಗಳ ನೋಟುಗಳ ಪೈಕಿ ಹೆಚ್ಚುಕಡಿಮೆ ಎಲ್ಲ ನೋಟುಗಳು ವಾಪಸಾಗಿವೆ ಎಂದು ಆರ್‌ಬಿಐ ಬುಧವಾರ ತನ್ನ ವಾರ್ಷಿಕ ವರದಿಯಲಿ ತಿಳಿಸಿತ್ತು.

ನೋಟು ಅಮಾನ್ಯ ಕ್ರಮ ಮತ್ತು ಜಿಎಸ್‌ಟಿ ನೇರ ತೆರಿಗೆ ಆದಾಯವನ್ನು ಹೆಚ್ಚಿಸಲಿವೆ. ಜಿಎಸ್‌ಟಿಯಿಂದಾಗಿ ಹೆಚ್ಚಿನ ಜನರು ತೆರಿಗೆ ಜಾಲಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದರು.

ನಿರೀಕ್ಷೆಗೂ ಮೀರಿದ ಹಣ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿರುವುದು ಆರ್ಥಿಕತೆಗೆ ಒಳ್ಳೆಯದು, ಹೀಗಾಗಿ ಸರಕಾರವು ಆ ಬಗ್ಗೆ ಕಳವಳಗೊಂಡಿಲ್ಲ ಎಂದ ಅವರು, ರಾಜಕೀಯ ಪ್ರತಿರೋಧವಿದ್ದರೂ ದೇಶವು ನೋಟು ಅಮಾನ್ಯ ಕ್ರಮಕ್ಕೆ ಸಿದ್ಧವಾಗಿತ್ತು ಎಂದು ಹೇಳಿದರು.

ಜಿಎಸ್‌ಟಿ ಕುರಿತಂತೆ ಜೇಟ್ಲಿ, ಹಣದುಬ್ಬರ ಪರಿಣಾಮ ನಿವಾರಣೆಯಾಗಿದೆ ಮತ್ತು ಮುಂದಿನ ದಿನಗಳಲ್ಲಿ ತೆರಿಗೆ ದರಗಳು ಏಕೀಕೃತಗೊಳ್ಳಲು ಅವಕಾಶಗಳಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News