ಮುಂಬೈಯಲ್ಲಿ ಕಟ್ಟಡ ಕುಸಿತ: 21 ಮಂದಿ ಸಾವು

Update: 2017-08-31 15:09 GMT

ಮುಂಬೈ, ಆ. 31: ಭಾರತದ ಆರ್ಥಿಕ ರಾಜಧಾನಿಯಲ್ಲಿ ಭಾರೀ ಮಳೆ ಸುರಿದ ಒಂದು ದಿನದ ಬಳಿಕ ದಕ್ಷಿಣ ಮುಂಬೈಯ ಜನದಟ್ಟಣೆಯ ಭೆಂಡಿ ಬಝಾರ್ ಪ್ರದೇಶದಲ್ಲಿ ಗುರುವಾರ 117 ವರ್ಷ ಹಳೆಯ 5 ಮಹಡಿಯ ವಸತಿ ಸಮುಚ್ಛಯ ಕುಸಿದು ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. 30 ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಕ್ಮೋದಿಯಾ ಬೀದಿಯಲ್ಲಿರುವ ಈ ಕಟ್ಟಡದಲ್ಲಿ 12 ಕುಟುಂಬಗಳು ಸೇರಿದಂತೆ 13 ಬಾಡಿಗೆದಾರರು ವಾಸವಾಗಿದ್ದರು. ಈ ಕಟ್ಟದಲ್ಲಿ ಒಂದು ಪ್ಲೇಸ್ಕೂಲ್ ಕೂಡ ಕಾರ್ಯಾಚರಿಸುತ್ತಿತ್ತು. ಆದರೆ, ಕಟ್ಟಡ ಕುಸಿಯುವ ವೇಳೆ ಪ್ಲೇಸ್ಕೂಲ್‌ಗೆ ಮಕ್ಕಳು ಆಗಮಿಸಿರಲಿಲ್ಲ ಎಂದು ವರದಿಯೊಂದು ತಿಳಿಸಿದೆ.

5 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಜೆ.ಜೆ. ಆಸ್ಪತ್ರೆಯ ಡಾ. ಟಿ.ವಿ. ಲಹಾನೆ ತಿಳಿಸಿದ್ದಾರೆ.

ಅಗ್ನಿಶಾಮಕ ದಳದ 125 ಸಿಬ್ಬಂದಿ, ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯ 90 ಮಂದಿ ಸದಸ್ಯರು ಪರಿಹಾರ ಕಾರ್ಯಾಚರಣೆಗಾಗಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಸುರಕ್ಷೆಯ ಹಿನ್ನೆಲೆಯಲ್ಲಿ ಸಮೀಪದ ಕಟ್ಟಡದಲ್ಲಿ ಇದ್ದ ಜನರನ್ನು ಕೂಡ ಸ್ಥಳಾಂತರಿಸಲಾಗಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಅವಶೇಷಗಳಡಿಯಿಂದ ಕನಿಷ್ಠ 3 ಮಂದಿಯನ್ನು ಹೊರತೆಗೆಯಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಕಟ್ಟಡ ಕುಸಿಯಲು ಕಾರಣವೇನು ಎಂಬುದರ ಬಗ್ಗೆ ಪೊಲೀಸರು ಇನ್ನಷ್ಟೇ ನಿರ್ಧರಿಸಬೇಕಿದೆ.

ಕಟ್ಟಡದ ಅವಶೇಷಗಳಡಿ ಸಿಲುಕಿದವರನ್ನು ಆದಷ್ಟು ಬೇಗ ಹೊರ ತೆಗೆಯುವ ಬಗ್ಗೆ ನಾವು ಆದ್ಯತೆ ನೀಡುತ್ತಿದ್ದೇವೆ ಎಂದು ಮಹಾರಾಷ್ಟ್ರ ಕೈಗಾರಿಕಾ ಸಚಿವ ಸುಭಾಶ್ ದೇಸಾಯಿ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಮುಗಿದ ಕೂಡಲೇ ಕಟ್ಟಡ ಕುಸಿಯಲು ಕಾರಣವಾದ ಅಂಶಗಳ ಬಗ್ಗೆ ಸರಕಾರ ತನಿಖೆ ನಡೆಸಲಿದೆ. ತಪ್ಪೆಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮುಂಬೈಯಲ್ಲಿ ಕಳೆದ ಮೂರು ತಿಂಗಳಲ್ಲಿ ಕುಸಿಯುತ್ತಿರುವ ಮೂರನೇ ಕಟ್ಟಡ ಇದಾಗಿದೆ. ಈ ದುರಂತಗಳಲ್ಲಿ ಇದುವರೆಗೆ 33 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News