ಹಣ, ದಾಖಲೆಗಳೊಂದಿಗೆ ಗುರ್ಮೀತ್ ಕುಟುಂಬ ತಪ್ಪಿಸಿಕೊಳ್ಳಲು ಸಹಕರಿಸಿದ ಹರ್ಯಾಣ ಸರಕಾರ: ಆರೋಪ

Update: 2017-08-31 15:58 GMT

ಚಂಡೀಗಡ, ಆ.31: ನಿಷೇಧಾಜ್ಞೆ ಉಲ್ಲಂಘಿಸಿ ಗುರ್ಮಿತ್ ಸಿಂಗ್ ಬೆಂಬಲಿಗರಿಗೆ ಪಂಚಕುಲದಲ್ಲಿ ಗುಂಪು ಸೇರಲು ಅವಕಾಶ ಮಾಡಿಕೊಟ್ಟಿರುವ ಆರೋಪ ಎದುರಿಸುತ್ತಿರುವ ಹರ್ಯಾಣದ ಬಿಜೆಪಿ ನೇತೃತ್ವದ ಸರಕಾರ ಇದೀಗ ಇನ್ನೊಂದು ಎಡವಟ್ಟು ಮಾಡಿಕೊಂಡಿದೆ. ಗುರ್ಮಿತ್ ಸಿಂಗ್ ಕುಟುಂಬ ಸದಸ್ಯರಿಗೆ ನಗದು, ದಾಖಲೆ ಪತ್ರದ ಸಹಿತ ಸಿರ್ಸಾ ಕೇಂದ್ರಕಚೇರಿ ತೊರೆಯಲು ಅವಕಾಶ ಮಾಡಿಕೊಟ್ಟಿರುವ ಆರೋಪ ಈಗ ಸರಕಾರದ ವಿರುದ್ಧ ಕೇಳಿಬರುತ್ತಿದೆ.

ತಾವು ಡೇರಾ ಸಚ್ಚಾ ಸೌದದ ಅನುಯಾಯಿಗಳನ್ನು ಸಿರ್ಸಾ ಮುಖ್ಯಕಚೇರಿಯಿಂದ ತೆರವುಗೊಳಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿಕೊಂಡಿದ್ದರು. ಆದರೆ ಮೂಲಗಳ ಪ್ರಕಾರ, ಹಣ, ದಾಖಲೆಪತ್ರ ಹಾಗೂ ಅಕ್ರಮ ಶಸ್ತ್ರಾಸ್ತ ಸಹಿತ ಗುರ್ಮಿತ್ ಅನುಯಾಯಿಗಳು ಹಾಗೂ ಕುಟುಂಬ ಸದಸ್ಯರಿಗೆ ರಾಜಸ್ತಾನಕ್ಕೆ ತೆರಳಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಇವು ಗುರ್ಮಿತ್ ವಿರುದ್ಧದ ಆರೋಪಕ್ಕೆ ಪ್ರಬಲ ಸಾಕ್ಷ್ಯವಾಗುವ ಸಾಧ್ಯತೆಯಿತ್ತು. ಅಲ್ಲದೆ ಪಂಚಕುಲ ಹಾಗೂ ಸಿರ್ಸಾದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವ ಅವಕಾಶವನ್ನು ಸೇನೆಗೆ ನೀಡಲು ಸರಕಾರ ನಿರಾಕರಿಸಿತ್ತು. ಸೇನೆಯನ್ನು ನಿಯೋಜಿಸಲಾಗಿದ್ದರೆ ಗುರ್ಮಿತ್ ಕುಟುಂಬ ಸದಸ್ಯರಿಗೆ ದಾಖಲೆ ಪತ್ರ ಸಹಿತ ಇಲ್ಲಿಂದ ತೆರಳಲು ಆಗುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಸಿರ್ಸಾ ಕೇಂದ್ರಕಚೇರಿಯಲ್ಲಿ ಕೋಟಿಗಟ್ಟಲೆ ಹಣ:

  ಕೇಂದ್ರ ಕಚೇರಿಯೊಳಗಡೆ ಗುರ್ಮಿತ್ ಸಿಂಗ್ ಕೋಟಿಗಟ್ಟಲೆ ರೂಪಾಯಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ. ಅಲ್ಲದೆ ನಿವೃತ್ತ ಸೇನಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಂದ ತರಬೇತಿ ಪಡೆದ ಖಾಸಗಿ ಸೈನಿಕರನ್ನು ಗುರ್ಮಿತ್ ಹೊಂದಿದ್ದು, ಇವರ ಬಳಕೆಗಾಗಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಚೇರಿಯೊಳಗೆ ಪೇರಿಸಿಡಲಾಗಿತ್ತು. ಆಗಸ್ಟ್ 25ರ ಮಧ್ಯರಾತ್ರಿ ಸಿರ್ಸಾ ಕಚೇರಿ ಸಮುಚ್ಚಯದಿಂದ ಹಲವಾರು ವಾಹನಗಳು ಸಂಶಯಾಸ್ಪದ ರೀತಿಯಲ್ಲಿ ಹೊರ ಸಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗುರ್ಮಿತ್‌ನ ಬಂಟರು ಈ ಶಸ್ತ್ರಾಸ್ತ್ರಗಳನ್ನು ಹೊರಗೆ ಸಾಗಿಸಿ ಬಚ್ಚಿಡಲು ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಅಲ್ಲದೆ ಗುರ್ಮಿತ್ ಬೆಂಬಲಿಗರು ಪೊಲೀಸರ ಸಮ್ಮುಖದಲ್ಲೇ ಕೆಲವು ಮಹತ್ವದ ದಾಖಲೆಪತ್ರಗಳನ್ನು ನಾಶಪಡಿಸಲು ಯಶಸ್ವಿಯಾಗಿದ್ದಾರೆ. ಈ ಸಂದರ್ಭ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಅಲ್ಲದೆ ಗುರ್ಮಿತ್ ಜೈಲಿಗೆ ತೆರಳುತ್ತಿದ್ದಂತೆಯೇ ಆತ ಬಳಸುತ್ತಿದ್ದ ಐಷಾರಾಮಿ ವಾಹನವೊಂದಕ್ಕೆ ಆತನ ಬೆಂಬಲಿಗರೇ ಬೆಂಕಿ ಹಚ್ಚಿ ಸುಟ್ಟಿದ್ದು, ಈ ವಾಹನದ ಜೊತೆ ಹಲವು ಮಹತ್ವದ ಸಾಕ್ಷ್ಯಾಧಾರಗಳೂ ನಾಶವಾಗಿವೆ ಎನ್ನಲಾಗಿದೆ.

 ಗುರ್ಮೀತ್ ಬಂಧನವಾಗುತ್ತಿದ್ದಂತೆಯೇ ಶಸ್ತ್ರಾಸ್ತ್ರ ತುಂಬಿದ್ದ ಟ್ರಕ್ ಒಂದನ್ನು ರಾಜಸ್ತಾನಕ್ಕೆ ತೆರಳಲು ಅವಕಾಶ ನೀಡಲಾಗಿದೆ. ಈಗ ಗುರ್ಮೀತ್ ಕುಟುಂಬಸದಸ್ಯರು ರಾಜಸ್ತಾನದಲ್ಲಿ ತಮ್ಮ ಪಿತ್ರಾರ್ಜಿತ ಮನೆಯಲ್ಲಿ ನೆಲೆಸಿದ್ದಾರೆ. ರಹೀಮ್‌ನ ದತ್ತುಪುತ್ರಿ ಹನಿಪ್ರೀತ್ ತಲೆಮರೆಸಿಕೊಂಡಿದ್ದು ಆಕೆಯ ಪತ್ತೆಕಾರ್ಯಾಚರಣೆ ತೀವ್ರಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಈ ಆರೋಪವನ್ನು ಹರ್ಯಾಣ ಪೊಲೀಸ್ ಮುಖ್ಯಸ್ಥ ಬಿ.ಎಸ್.ಸಂಧು ನಿರಾಕರಿಸಿದ್ದಾರೆ. ಶಸ್ತ್ರಾಸ್ತ್ರ ಹೊಂದಿರುವ ಟ್ರಕ್ ರಾಜಸ್ತಾನದತ್ತ ತೆರಳಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಏನಿದ್ದರೂ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

 ಈ ಮಧ್ಯೆ, ಜೈಲಿನಲ್ಲಿರುವ ಖೈದಿಗಳನ್ನು ಭೇಟಿಯಾಗಲು ಅಕಾರಾದಿ ಕ್ರಮದ ಅನುಸಾರ ವ್ಯವಸ್ಥೆ ಮಾಡಲಾಗುತ್ತದೆ. ಗುರ್ಮೀತ್ ನ ಹೆಸರಿನ ಮೊದಲಕ್ಷರ ಜಿ ಆಗಿರುವುದರಿಂದ ಆತನ ಕುಟುಂಬ ಸದಸ್ಯರು ಸೋಮವಾರ ಮತ್ತು ಗುರುವಾರ ಮಾತ್ರ ಭೇಟಿಯಾಗಲು ಅವಕಾಶವಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

 ಪದತ್ಯಾಗಕ್ಕೆ ಖಟ್ಟರ್ ನಿರಾಕರಣೆ:

ಪಕ್ಷದ ಸದಸ್ಯರ ಸಹಿತ ವಿವಿಧೆಡೆಗಳಿಂದ ಟೀಕಾಪ್ರಹಾರ ಎದುರಾಗಿದ್ದರೂ ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಪದತ್ಯಾಗ ಮಾಡಲು ನಿರಾಕರಿಸಿದ್ದಾರೆ. ಅಲ್ಲದೆ ಬಿಜೆಪಿ ಹೈಕಮಾಂಡ್ ಕೂಡಾ ಖಟ್ಟರ್ ಪರ ನಿಂತಿದೆ ಎನ್ನಲಾಗುತ್ತಿದೆ. ಆದರೂ, ರಾಜ್ಯ ಸಚಿವ ಸಂಪುಟದ ಪುನರಚನೆಗೆ ಹೈಕಮಾಂಡ್ ಒಲವು ತೋರಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News