×
Ad

ಮನಪಾ ಸಭೆ: ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಗುತ್ತಿಗೆದಾರರ ವಿರುದ್ಧ ಸದಸ್ಯರಿಂದ ಆಕ್ರೋಶ

Update: 2017-08-31 21:58 IST

ಮಂಗಳೂರು, ಆ. 31: ಮನಪಾ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಬಗೆಹರಿಯದಿರುವ ಬಗ್ಗೆ ಮನಪಾ ಸಭೆಯಲ್ಲಿಂದು ಗುತ್ತಿಗೆದಾರರ ವಿರುದ್ಧ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಒಕ್ಕೊರಲಿನಿಂದ ಆಕ್ರೋಶ ವ್ಯಕ್ತ ಪಡಿಸಿ, ಸಂಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಮನಪಾ ಅಧ್ಯಕ್ಷೆ ಕವಿತಾ ಸನಿಲ್ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ 13ಕ್ಕೂ ಅಧಿಕ ಹಿರಿಯ ಸದಸ್ಯರು ಮನಪಾ ವ್ಯಾಪ್ತಿಯಲ್ಲಿ ಕಸವಿಲೇವಾರಿಗೆ ಗುತ್ತಿಗೆ ಪಡೆದಿರುವ ಸಂಸ್ಥೆಯ ವಿರುದ್ಧ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದರು. ಈ ಬಗ್ಗೆ ಗುತ್ತಿಗೆದಾರರಿಗೆ ಸೂಕ್ತ ಎಚ್ಚರಿಕೆ ನೀಡಲಾಗಿದೆ ಎಂದು ಮೇಯರ್ ಸಭೆಗೆ ತಿಳಿಸಿದರು.

ಕಸ ವಿಲೇವಾರಿಗೆ ಗುತ್ತಿಗೆ ಪಡೆದಿರುವ ಆ್ಯಂಟನಿ ವೇಸ್ಟ್ ಕಂಪೆನಿ ಒಪ್ಪಂದದ ಪ್ರಕಾರ ಕಾರ್ಯನಿರ್ವಹಿಸದಿರುವ ಬಗ್ಗೆ ಕಾನೂನು ಕ್ರಮಕ್ಕಾಗಿ ನೋಟಿಸು ಜಾರಿ ಮಾಡಲಾಗುವುದು ಎಂದು ಮನಪಾ ಆಯುಕ್ತ ಮಹಮ್ಮದ್ ನಝೀರ್ ಸಭೆಗೆ ತಿಳಿಸಿದರು. ಮನಪಾ ಹಿರಿಯ ಸದಸ್ಯರಾದ ಮಹಾಬಲ ಮಾರ್ಲ, ಹರಿನಾಥ್, ಭಾಸ್ಕರ ಎಂ, ವಿಪಕ್ಷ ಮುಖಂಡ ಗಣೇಶ್ ಹೊಸ ಬೆಟ್ಟು, ಸುಧೀರ್‌ಶೆಟ್ಟಿ, ದೀಪಕ್ ಪೂಜಾರಿ, ರೂಪಾ ಡಿ.ಬಂಗೇರಾ, ಪುರುಷೋತ್ತಮ, ಡಿ.ಕೆ.ಅಶೋಕ್ ಕುಮಾರ್, ರಾಧಾಕೃಷ್ಣ, ಮುಹಮ್ಮದ್.ಕೆ, ಪೇಮಾನಾಂದ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ , ನವೀನ್ ಚಂದ್ರ ಮೊದಲಾದವರು ಗುತ್ತಿಗೆ ಪಡೆದಿರುವ ಆ್ಯಂಟನಿ ವೇಸ್ಟ್ ಕಂಪೆನಿ ಹಾಗೂ ಮನಪಾ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತ ಪಡಿಸಿದರು.

ಕಸ ವಿಲೇವಾರಿ ಸಮರ್ಪಕವಾಗಿ ನಡೆಯದಿರುವ ಬಗ್ಗೆ ಮನಪಾ ವ್ಯಾಪ್ತಿಯ ಸಾರ್ವಜನಿಕರು ದೂರು ನೀಡಿದ್ದಾರೆ. ಇತ್ತೀಚೆಗೆ ಕಸವಿಲೇವಾರಿ ಮಾಡುವ ಕೆಲಸಗಾರರು ದಿಢೀರ್ ಮುಷ್ಕರ ಮಾಡಿದಾಗ ತುರ್ತು ಕಾರ್ಯವಾಗಿರುವುದರಿಂದ ಅವರ ಜೊತೆ ಮಾತುಕತೆ ನಡೆಸಿ ಮುಷ್ಕರ ನಡೆದಿರುವ ಸ್ಥಳಕ್ಕೆ ತೆರಳಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಮಾಡಲು ಶ್ರಮಿಸಿರುವುದಾಗಿ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ,ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ ಸಭೆಗೆ ತಿಳಿಸಿದ್ದಾರೆ.

ಕಸ ವಿಲೇವಾರಿಗೆ ಸಂಬಂಧಿಸಿದಂತೆ ಮನಪಾ ಜೊತೆ ಒಪ್ಪಂದ ಮಾಡಿಕೊಂಡ ಆ್ಯಂಟನಿ ವೇಸ್ಟ್ ಕಂಪೆನಿಯ ಮುಖ್ಯಸ್ಥರು ಹೊಣೆಗಾರರಾಗುತ್ತಾರೆ ಅವರ ಜೊತೆ ಈ ಸಮಾಲೋಚನೆ ನಡೆಸಲಾಗುವುದು. ಮುಂದಿನ ವಾರದಲ್ಲಿ ಪ್ರತಿ ವಾರ್ಡ್‌ನಲ್ಲಿ ಕಸವಿಲೇವಾರಿಗೆ ಸಂಬಂಧಿಸಿದಂತೆ ಮನಪಾ ವತಿಯಿಂದ ಭೇಟಿ ನೀಡಿ ಸಮಸ್ಯೆ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರ ಮನೆಗೆ ಐ.ಟಿ ದಾಳಿ; ಮನಪಾ ಸದಸ್ಯರಿಂದ ದಾಂಧಲೆ ಪ್ರಕರಣ; ವಿಪಕ್ಷ ಸದಸ್ಯರ ಖಂಡನೆ: ಇತ್ತೀಚೆಗೆ ರಾಜ್ಯದ ಇಂಧನ ಸಚಿವರ ಮನೆಯ ಮೇಲೆ ಐ.ಟಿ ದಾಳಿ ನಡೆದ ಸಂದರ್ಭದಲ್ಲಿ ಮಂಗಳೂರಿನಲ್ಲಿರುವ ಆದಾಯ ತೆರಿಗೆಯ ಕಚೇರಿ ಮೇಲೆ ಮನಪಾ ಸದಸ್ಯರು ಪ್ರವೇಶಿಸಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವುದು ಸದಸ್ಯರ ಘನತೆಗೆ ತಕ್ಕುದಾದ ಕೆಲಸವಲ್ಲ. ಈ ಬಗ್ಗೆ ಮನಪಾ ವಿಪಕ್ಷ ಸದಸ್ಯರು ಖಂಡನೆ ವ್ಯಕ್ತಪಡಿಸಿ ಮನಪಾ ಸದಸ್ಯ ವಿನಯರಾಜ್ ಸಭೆಯಲ್ಲಿ ಕ್ಷಮೆ ಕೋರುವಂತೆ ಆಗ್ರಹಿಸಿದರು.

ಈ ಬಗ್ಗೆ ಉತ್ತರ ನೀಡಿದ ಮೇಯರ್ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತದೆ. ನ್ಯಾಯಾಲಯ ತೀರ್ಪನ್ನು ನಾವು ಪಾಲಿಸಬೇಕಾಗಿದೆ. ಸರಿ ತಪ್ಪು ಅಲ್ಲಿ ತೀರ್ಮಾನವಾಗಲಿದೆ ಎಂದು ಸದಸ್ಯರಿಗೆ ಮನವರಿಕೆ ಮಾಡಿದರು. ಮನಪಾ ವ್ಯಾಪ್ತಿಯಲ್ಲಿ ವಲಯ ಜನಸಾಮಾನ್ಯರಿಗೆ ಮನೆಕಟ್ಟಲು ಸಮಸ್ಯೆಯಾಗಿರುವ ವಲಯ ನಿಯಮಾವಳಿವನ್ನು ಬದಲಾಯಿಸಬೇಕು ಈ ಬಗ್ಗೆ ಮನಪಾ ಸದಸ್ಯರ ಆಕ್ಷೇಪವನ್ನು ಮನಪಾ ಸಭೆ ಕರೆದು ದಾಖಲಿಸಿ ಸರಕಾರದ ಗಮನಕ್ಕೆ ತರಲು ನಿರ್ಧರಿಸಲಾಯಿತು.

ಮಂಗಳೂರು ಮಹಾನಗರ ಪಾಲಿಕೆಗೆ ಬಯಲು ಬಹಿರ್ದೆಸೆ ಮುಕ್ತ ಪಾಲಿಕೆಗಾಗಿ ರಾಜ್ಯ ಸರಕಾರ ಪುರಸ್ಕಾರವನ್ನು ಗುರುವಾರ ಸ್ವೀಕರಿಸಿ ಸಭೆಗೆ ಆಗಮಿಸಿರುವುದಾಗಿ ತಿಳಿಸಿ ಈ ಪ್ರಶಸ್ತಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಮೇಯರ್ ಕವಿತಾ ಸನಿಲ್ ತಿಳಿಸಿದರು.

ಸಭೆಯ ವೇದಿಕೆಯಲ್ಲಿ ಮನಪಾ ಆಯುಕ್ತ ಮುಹಮ್ಮದ್ ನಝೀರ್, ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಾಗವೇಣಿ, ಅಬ್ದುಲ್ ರವೂಫ್, ಪ್ರತಿಭಾ ಕುಳಾಯಿ, ಸಬಿತಾ ಮಿಸ್ಕತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News