ಎಂಬಿಬಿಎಸ್ ಪದವಿಗೆ ಪ್ರವೇಶ ಪ್ರಕ್ರಿಯೆ ನಡೆಸಲು ಕಣಚೂರು ಸಂಸ್ಥೆಗೆ ಸುಪ್ರೀಂ ಅನುಮತಿ
ಹೊಸದಿಲ್ಲಿ, ಆ.31: ಮಂಗಳೂರು ಮೂಲದ ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ (ಕೆಐಇಟಿ)ನ ಆಶ್ರಯದಲ್ಲಿರುವ ದೇರಳಕಟ್ಟೆಯ ಕಣಚೂರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಕಾಲೇಜಿಗೆ 2017-18 ಮತ್ತು 2018-19ರಲ್ಲಿ ಎಂಬಿಬಿಎಸ್ ಪದವಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸದಂತೆ ಕೇಂದ್ರ ಸರಕಾರ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಕೇಂದ್ರ ಸರಕಾರದ ಆದೇಶವನ್ನು ಪ್ರಶ್ನಿಸಿ ಹಾಗೂ 2017-18ರ ಸಾಲಿನ ಎಂಬಿಬಿಎಸ್ ಪ್ರವೇಶದ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 5ರವರೆಗೆ ವಿಸ್ತರಿಸಬೇಕು ಎಂಬ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ನ್ಯಾಯಾಲಯ ಪೀಠ ಪುರಸ್ಕರಿಸಿದೆ.
ಅಲ್ಲದೆ, ನಿಜವಾಗಿಯೂ ಅಗತ್ಯವಿದ್ದರೆ ಮಾತ್ರ ಸಂಸ್ಥೆಯ ಪರಿಶೀಲನೆ ನಡೆಸುವಂತೆ ನ್ಯಾಯಾಲಯ ಪೀಠವು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ)ಕ್ಕೆ ಸೂಚಿಸಿತು. ಕೆಐಇಟಿಯಲ್ಲಿ ಪರಿಶೀಲನೆ ನಡೆಸಿದ ಸಂದರ್ಭ ಕೆಲವು ಮೂಲಭೂತ ಸೌಕರ್ಯದ ಕೊರತೆ ಇತ್ತು ಎಂದು ಈ ಹಿಂದೆ ಎಂಸಿಐ ನೀಡಿದ ವರದಿಯ ಆಧಾರದಲ್ಲಿ , 2017-18 ಮತ್ತು 18-19ರಲ್ಲಿ ವಿದ್ಯಾರ್ಥಿಗಳನ್ನು ಎಂಬಿಬಿಎಸ್ ಪದವಿಗೆ ದಾಖಲಾತಿ ಮಾಡಿಕೊಳ್ಳದಂತೆ ದೇರಳಕಟ್ಟೆಯಲ್ಲಿರುವ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್‌ಗೆ ಕೇಂದ್ರ ಸರಕಾರ ಸೂಚಿಸಿತ್ತು.
ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಮೂಲಭೂತ ಸೌಕರ್ಯದ ಕೊರತೆಯ ಬಗ್ಗೆ ಯಾವುದೇ ಸಮರ್ಥನೀಯ ದಾಖಲೆ ನೀಡಲು ಪ್ರತಿವಾದಿ(ಕೇಂದ್ರ ಆರೋಗ್ಯ ಇಲಾಖೆ ಮತ್ತು ಎಂಸಿಐ) ವಿಫಲವಾಗಿದೆ.
ಪ್ರತಿವಾದಿಗಳ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿರುವ ನ್ಯೂನತೆ ಹಾಗೂ ದೋಷವನ್ನು ಗಮನಿಸಿ, ಕಣಚೂರು ಸಂಸ್ಥೆಯ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಾಲಯ ಪೀಠ ಆದೇಶದಲ್ಲಿ ತಿಳಿಸಿದೆ.
ನ್ಯಾಯಕ್ಕೆ ಸಂದ ಜಯ
ಕಣಚೂರು ಮೆಡಿಕಲ್ ಸಯನ್ಸ್ ಕಾಲೇಜಿನ ಎಂಬಿಬಿಎಸ್ ಪದವಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿ ಕೇಂದ್ರ ಸರಕಾರ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸುವ ಮೂಲಕ ನಮಗೆ ನ್ಯಾಯ ಸಿಕ್ಕಿದಂತಾಗಿದೆ. ಇದು ಜನರಿಗೆ ನ್ಯಾಯಾಲಯದ ಮೇಲಿನ ಇದ್ದ ಭರವಸೆಯನ್ನು ಇಮ್ಮಡಿಗೊಳಿಸಿದೆ ಎಂದು ಕಣಚ್ಚೂರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಯು.ಕೆ.ಮೋನು ಪ್ರತಿಕ್ರಿಯೆ ನೀಡಿದ್ದಾರೆ.
ನ್ಯಾಯಾಲಯದ ತೀರ್ಪಿನಿಂದ ಹರ್ಷವಾಗಿದೆ. ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ವಿವಿಧ ಮೂಲಭೂತ ಸೌಲಭ್ಯಗಳ ಸಹಿತ ಉತ್ತಮ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ಪರಿಗಣಿಸಿ ನ್ಯಾಯಾಲಯವು ತೀರ್ಪು ನೀಡಿದೆ ಎಂದವರು ಹೇಳಿದ್ದಾರೆ.