ಮಂಗಳೂರಿಗೂ ಲಗ್ಗೆ ಇಟ್ಟ ಬ್ಲೂವೇಲ್ ಸುಸೈಡ್ ಗೇಮ್!

Update: 2017-09-01 08:06 GMT
ಸಾಂದರ್ಭಿಕ ಚಿತ್ರ

  • ಶಿಕ್ಷಕ, ಪಾಲಕರ ಸಮಯಪ್ರಜ್ಞೆಗೆ ಬಾಲಕ ಅಪಾಯದಿಂದ ಪಾರು

ಮಂಗಳೂರು, ಸೆ.1: ವಿಶ್ವದಾದ್ಯಂತ ಹದಿಹರೆಯದ ಮಕ್ಕಳನ್ನೇ ಗುರಿಯಾಗಿಸಿ, ಆತ್ಮಹತ್ಯೆಗೆ ಪ್ರೇರೇಪಿಸಿ ಈಗಾಗಲೇ 130ಕ್ಕೂ ಅಧಿಕ ಮಕ್ಕಳ ಸಾವಿಗೆ ಕಾರಣವಾದ ಬ್ಲೂವೇಲ್ ಎಂಬ ಸುಸೈಡ್ ಗೇಮ್ ಇದೀಗ ಮಂಗಳೂರಿಗೂ ಲಗ್ಗೆ ಇರಿಸಿದ್ದು, ಪೋಷಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ನಗರದ ಖಾಸದಿ ವಿದ್ಯಾಸಂಸ್ಥೆಯ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಬ್ಲೂವೇಲ್ ಗೇಮ್‌ನ ಮಾಯಾಮೋಹಕ್ಕೆ ಸಿಲುಕಿ ಬ್ಲೇಡ್‌ನಿಂದ ತನ್ನ ಕೈಯನ್ನೇ ಕೊಯ್ದುಕೊಂಡಿರುವ ಘಟನೆ ನಡೆದಿದೆ.

ಸೂಕ್ತ ಸಮಯದಲ್ಲಿ ಶಾಲಾ ಶಿಕ್ಷಕರು ಹಾಗೂ ಪೋಷಕರು ಗಮನಿಸಿದ ಹಿನ್ನೆಲೆಯಲ್ಲಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಮಧ್ಯಮ ಕುಟುಂಬವೊಂದರ 9ನೆ ತರಗತಿಯ ವಿದ್ಯಾರ್ಥಿ, ಪೋಷಕರು ಕೊಡಿಸಿದ್ದ ಮೊಬೈಲ್ ಮೂಲಕ ಈ ಗೇಮ್ ಡೌನ್‌ಲೋಡ್ ಮಾಡಿಕೊಂಡು ಆಟವಾಡುತ್ತಿದ್ದ. ಆದರೆ, ಈ ಬಗ್ಗೆ ಪೋಷಕರಿಗೆ ಯಾವುದೇ ಮಾಹಿತಿ ಇರಲಿಲ್ಲ. ಕೆಲ ದಿನಗಳ ಹಿಂದೆ ವಿದ್ಯಾರ್ಥಿ ಪಠ್ಯದಲ್ಲಿ ನಿರಾಸಕ್ತಿ ತೋರಿಸುತ್ತಿರುವ ಕುರಿತಂತೆ ಶಿಕ್ಷಕರು ಪೋಷಕರನ್ನು ಕರೆಸಿ ಮಾಹಿತಿ ನೀಡಿದ್ದರಿಂದ ಎಚ್ಚೆತ್ತ ಪೋಷಕರು ಮಗನ ಬಗ್ಗೆ ನಿಗಾ ಇಡಲಾರಂಭಿಸಿದ್ದರು. ಆಗ ಆತ ಈ ಬ್ಲೂವೇಲ್ ಗೇಮ್‌ನ ಬಲೆಯೊಳಗೆ ಸಿಲುಕಿರುವುದು ಪೋಷಕರ ಅರಿವಿಗೆ ಬಂದಿದೆ.

ಕೈತುಂಬ ಬ್ಲೇಡ್‌ನಿಂದ ಗಾಯ ಮಾಡಿಕೊಂಡಿದ್ದ ಗುರುತುಗಳು ಪೋಷಕರ ಗಮನಕ್ಕೆ ಬಂದಿದ್ದು, ಈ ಬಗ್ಗೆ ವಿಚಾರಿಸಿದಾಗ ಬ್ಲೂವೇಲ್ ಗೇಮ್ ಆಡುತ್ತಿದ್ದ ಬಗ್ಗೆ ಆತ ಒಪ್ಪಿಕೊಂಡಿದ್ದಾನೆ. ಬಳಿಕ ಪೋಷಕರು ಆಪ್ತ ಸಮಾಲೋಚಕರ ಬಳಿಗೆ ಕರೆದೊಯ್ದು ಚಿಕಿತ್ಸೆ ನೀಡಿದ ಹಿನ್ನೆಲೆಯಲ್ಲಿ ಸದ್ಯ ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಇದೀಗ ಈ ವಿದ್ಯಾರ್ಥಿ ಮಾತ್ರವಲ್ಲದೆ, ಇನ್ನೂ ಹಲವಾರು ವಿದ್ಯಾರ್ಥಿಗಳು ಈ ಗೇಮ್‌ನ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

ಪೋಷಕರೇ ಇರಲಿ ಮಕ್ಕಳ ಬಗ್ಗೆ ನಿಗಾ
ಬ್ಲೂವೇಲ್ ಗೇಮ್ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದು ಪೋಷಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಈ ಗೇಮನ್ನು ಸದ್ಯ ಬ್ಲಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಈಗಾಗಲೇ ಡೌನ್‌ಲೋಡ್ ಆಗಿರುವವರಿಂದ ಒಬ್ಬರಿಂದ ಒಬ್ಬರಿಗೆ ಹರಿದಾಡುತ್ತಿರುವ ಬಗ್ಗೆ ಅನುಮಾನವಿದೆ. ಗುಪ್ತ ರೀತಿಯಲ್ಲಿ ಹದಿಹರೆಯದ ಮಕ್ಕಳನ್ನೇ ಈ ಗೇಮ್ ಮೂಲಕ ಟಾರ್ಗೆಟ್ ಮಾಡಿ ಗೇಮ್‌ನ ನೆಪದಲ್ಲಿ ಅಪಾಯಕಾರಿ ಟಾರ್ಗೆಟ್‌ಗಳನ್ನು ನೀಡಿ ಅವರ ಮಾನಸಿಕ ಆಲೋಚನಾ ಶಕ್ತಿಯನ್ನು ಕುಗ್ಗಿಸಿ ಅಪಾಯಕ್ಕೆ ತಳ್ಳುವ ತೀರಾ ಅಪಾಯಕಾರಿ ಗೇಮ್ ಇದಾಗಿದೆ. ಮೊಬೈಲ್ ಹಾಗೂ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿ ಅಂತರ್ಜಾಲದಲ್ಲಿ ಹೆಚ್ಚಿನ ಹೊತ್ತು ಕಳೆಯುವ ತಮ್ಮ ಮಕ್ಕಳ ಬಗ್ಗೆ ಸದಾ ಎಚ್ಚರಿಕೆ ಹಾಗೂ ನಿಗಾ ವಹಿಸುವುದು ಅಗತ್ಯವಾಗಿದೆ. ತಮ್ಮ ಮಕ್ಕಳ ವರ್ತನೆಯಲ್ಲಿ ಯಾವುದೇ ರೀತಿಯ ಸಣ್ಣ ಪುಟ್ಟ ವ್ಯತ್ಯಾಸಗಳು ಕಂಡು ಬಂದಲ್ಲಿಯೂ ಪೋಷಕರು ಪರಿಶೀಲನೆ, ಆತ್ಮೀಯತೆಯ ಮೂಲಕ ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದರಿಂದ ಅಪಾಯವನ್ನು ತಪ್ಪಿಸಬಹುದಾಗಿದೆ.

ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ
ನಗರದಲ್ಲಿ ಬ್ಲೂವೇಲ್ ಗೇಮ್‌ನಿಂದ ವಿದ್ಯಾರ್ಥಿ ಅಪಾಯಕ್ಕೆ ಸಿಲುಕಿರುವ ಬಗ್ಗೆ ಪೊಲೀಸ್ ಇಲಾಖೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪೋಷಕರಲ್ಲಿ ಧೈರ್ಯ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಲಾಖೆಯಿಂದ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News