ಟ್ವಿಟರ್ ನಲ್ಲಿ ಬಿಜೆಪಿಯನ್ನು ಕುಟುಕಲು ಕೊನೆಗೂ ಕಲಿತ ಕಾಂಗ್ರೆಸ್

Update: 2017-09-01 08:11 GMT

ಹೊಸದಿಲ್ಲಿ, ಸೆ.1: ಸಾಮಾಜಿಕ ಜಾಲತಾಣಗಳನ್ನು ತನ್ನ ಲಾಭಕ್ಕಾಗಿ ಹೇಗೆ ಉಪಯೋಗಿಸಬಹುದೆಂಬುದನ್ನು ಕಾಂಗ್ರೆಸ್ ಪಕ್ಷ ತಡವಾಗಿಯಾದರೂ ತನ್ನ ವೈರಿ ಪಕ್ಷ ಬಿಜೆಪಿಯಿಂದ ಕಲಿತುಕೊಂಡಿದೆಯೆಂಬುದು ಅದರ ಇತ್ತೀಚಿಗಿನ ಟ್ವಿಟ್ಟರ್ ಕ್ವಿರ್ ಒಂದರಿಂದ ಸಾಬೀತಾಗಿದೆ.

ಬಿಜೆಪಿಯ ಐಡಿಯಾದ ಪಡಿಯಚ್ಚೆಂಬಂತೆ ಕಾಂಗ್ರೆಸ್ ಪಕ್ಷ ನಿಯಮಿತವಾಗಿ ನಡೆಸಲಾರಂಭಿಸಿದ ಟ್ವಿಟ್ಟರ್ ಕ್ವಿರ್ ನ ಲೇಟೆಸ್ಟ್ ಪ್ರಶ್ನೆ ಇಂತಿದೆ.

‘‘ದೇಶದ ಆರ್ಥಿಕತೆಗೆ ಕೋಟಿಗಟ್ಟಲೆ ನಷ್ಟವುಂಟು ಮಾಡಿದ ನೋಟು ಅಮಾನ್ಯೀಕರಣವನ್ನು 2016ರಲ್ಲಿ ಜಾರಿಗೆ ತಂದ ಪ್ರಧಾನಿ ಯಾರು?.’’ ಕಳೆದ ವರ್ಷ ಅಮಾನ್ಯೀಕರಣಗೊಂಡ ನೋಟುಗಳಲ್ಲಿ ಶೇ.99ರಷ್ಟು ಬ್ಯಾಂಕುಗಳಲ್ಲಿ ಠೇವಣಿಯಿರಿಸಲಾಗಿದೆ ಎಂದು ಆರ್ ಬಿ ಐ ಹೇಳಿದ್ದಕ್ಕೆ ಪ್ರತಿಯಾಗಿ ಮೇಲಿನ ಪ್ರಶ್ನೆಯನ್ನು ಕ್ವಿರ್ ಭಾಗವಾಗಿ ಪಕ್ಷ ಕೇಳಿದೆ. ನೋಟು ಅಮಾನ್ಯೀಕರಣ ಒಂದು ವಿಫಲ ಕ್ರಮವೆಂದು ಆರ್ ಬಿ ಐ ಹೇಳಿಕೆಯಿಂದ ಸ್ಪಷ್ಟ ಎಂದು ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಹೇಳಿಕೊಂಡಿವೆ.

ಅಮಾನ್ಯೀಕರಣ ಒಂದು ಬೃಹತ್ ವೈಫಲ್ಯವೆಂಬುದನ್ನು ಒಪ್ಪಿಕೊಳ್ಳಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಟ್ವೀಟ್ ಮುಖಾಂತರ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಾದಂತಹ ಟ್ವಿಟ್ಟರನ್ನು ಹೇಗೆ ಇತ್ತೀಚಿಗಿನ ದಿನಗಳಲ್ಲಿ ಸಮರ್ಪಕವಾಗಿ ಉಪಯೋಗಿಸುತ್ತಿದೆ ಎಂಬುದಕ್ಕೆ ಕಳೆದ ತಿಂಗಳು ಅದು ಕ್ವಿಟ್ ಇಂಡಿಯಾ ಚಳುವಳಿಯ 75ನೆ ವಾರ್ಷಿಕೋತ್ಸವದ ಸಂದರ್ಭ ಟ್ವಿಟ್ಟರ್ ಕ್ವಿರ್ ಅಂಗವಾಗಿ ಕೇಳಿದ ಇನ್ನೊಂದು ಪ್ರಶ್ನೆ ಸ್ವಾರಸ್ಯಕರವಾಗಿತ್ತು.

‘‘ಕ್ವಿಟ್ ಇಂಡಿಯಾ ಚಳುವಳಿಯನ್ನು ಬಹಿಷ್ಕರಿಸುವಂತೆ ಸದಸ್ಯರಿಗೆ ಕರೆ ನೀಡಿ ಸ್ಟಿಕ್ ಟು ಯುವರ್ ಪೋಸ್ಟ್ಸ್ ಎಂಬ ಶೀರ್ಷಿಕೆಯ ಪತ್ರವನ್ನು ಬರೆದ ಹಿಂದೂ ಮಹಾಸಭಾ ನಾಯಕ ಯಾರು?’’ ಎಂಬುದೇ ಆ ಪ್ರಶ್ನೆ ಆಗಿತ್ತು. ಇದಕ್ಕೆ ಉತ್ತರ ನೀಡಲು ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು- ವಿ ಡಿ ಸಾರ್ವಕರ್, ಕೆ ಬಿ ಹೆಡ್ಗೆವಾರ್, ಎಂ ಎಸ್ ಗೋಲ್ವಾಲ್ಕರ್, ಶ್ಯಾಮ ಪ್ರಸಾದ್ ಮುಖರ್ಜಿ. ಈ ಪ್ರಶ್ನೆಗೆ ಉತ್ತರ ಸಾರ್ವಕರ್ ಆಗಿತ್ತು. ಸಾರ್ವಕರ್ ಅವರು ಪ್ರಧಾನಿ ಮೋದಿ ಹಾಗೂ ಬಿಜೆಪಿಯ ನೆಚ್ಚಿನ ನಾಯಕರಾಗಿದ್ದರೂ, ಕ್ವಿಟ್ ಇಂಡಿಯಾ ಚಳುವಳಿಯನ್ನು ಬಹಿಷ್ಕರಿಸಿದವರು. ವಿವಿಧ ಸರಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಭಾದ ಸದಸ್ಯರಿಗೆ ಸ್ಟಿಕ್ ಟು ಯುವರ್ ಪೋಸ್ಟ್ಸ್ ಎಂಬ ಶೀರ್ಷಿಕೆಯಡಿ ಪತ್ರ ಬರೆದು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸದಂತೆ ಹಾಗೂ ತಮ್ಮ ಹುದ್ದೆಯಲ್ಲಿ ಮುಂದುವರಿಯುವಂತೆ ಸಲಹೆಯನ್ನು ಅವರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News