ವಿದ್ಯಾರ್ಥಿಗಳಿಂದ ಸಹಾಯಹಸ್ತಕ್ಕಾಗಿ ‘ಕಾಸ್’

Update: 2017-09-01 08:32 GMT

ಮಂಗಳೂರು, ಸೆ.1: ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಮಾಜದಲ್ಲಿ ಅರ್ಹರಿಗೆ ಸಹಾಯ ಹಸ್ತ ನೀಡುವ ಉದ್ದೇಶದಿಂದ ಕಾಸ್ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಕಾರ್ಯಕ್ರಮ ಸೆ. 2ರಂದು ನಗರದ ಸಿಟಿ ಸೆಂಟರ್ ಮಾಲ್ ಹಾಗೂ ಸೆ.3ರಂದು ಫೋರಂ ಫಿಜಾ ಮಾಲ್‌ನಲ್ಲಿ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಹಾನ್ ಆಳ್ವ, ಈ ಕಾರ್ಯಕ್ರಮಗಳ ಮೂಲಕ ಸಂಗ್ರಹವಾಗುವ ಹಣವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ, ವಯೋವೃದ್ಧರಿಗೆ ನೆರವಾಗಲು ಬಳಸಲಾಗುವುದು ಎಂದರು.

ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ತಮ್ಮಿಂದಾದ ನೆರವನ್ನು ಸಮಾಜಕ್ಕೆ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ.ಎರಡು ದಿನಗಳ ಕಾರ್ಯಕ್ರಮದಲ್ಲಿ ಈ ಎರಡು ಮಾಲ್‌ಗಳಲ್ಲಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ಆಹಾರ ವಸ್ತುಗಳು ಹಾಗೂ ಬುಕ್‌ಮಾರ್ಕ್‌ಗಳ ಮಾರಾಟ ನಡೆಸಲಿದ್ದಾರೆ. ಸೆ. 3ರಂದು ಫೋರಂ ಫಿಝಾ ಮಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೃತ್ಯಗಾರ್ತಿ ದಿಶಾ ಮದನ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದಲ್ಲದೆ ಹಲವಾರು ಆಕರ್ಷಕ ನೃತ್ಯಗಳಿಗೆ, ಪಾಶ್ಚಾತ್ಯ ಸಂಗೀತೋಪಕರಣ ವಾದನವನ್ನೂ ಆಯೋಜಿಸಲಾಗಿದೆ. 

ಪ್ರಸಕ್ತ ಸಾಲಿನಲ್ಲಿ ನಗರದ ಕಾಲೇಜೊಂದರಲ್ಲಿ ಇಂಜನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಯ ಮನೆ ನಿರ್ಮಾಣಕ್ಕೆ ನೆರವು ನೀಡಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.ಪ್ರತಿಭಾನ್ವಿತ ವಿದ್ಯಾರ್ಥಿಯಾದ ಆತ ಗುಡಿಸಲಿನ ಮನೆಯಲ್ಲಿದ್ದು, ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾನೆ. ಇದು ನಮ್ಮ ತಂಡಕ್ಕೆ ತಿಳಿದ ಹಿನ್ನೆಲೆಯಲ್ಲಿ ಆತನಿಗೆ ಮನೆ ನಿರ್ಮಿಸುವ ಕಾರ್ಯದಲ್ಲಿ ನಮ್ಮಿಂದಾದಷ್ಟು ನೆರವನ್ನು ನೀಡಲು ನಾವು ನಿರ್ಧರಿಸಿದ್ದೇವೆ ಎಂದು ಸುಹಾನ್ ಆಳ್ವ ತಿಳಿಸಿದರು.

 
ಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಮುಹಮ್ಮದ್ ನವಾಝ್, ಈಶ್ವರ್ ಶೆಟ್ಟಿ, ಶ್ರುತಿ ಲಾಲ್, ಮೀಥಿ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News