×
Ad

ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡುವಂತೆ ರುಡಿಗೆ ಸೂಚನೆ

Update: 2017-09-01 13:51 IST

ಹೊಸದಿಲ್ಲಿ,ಸೆ.1: ಕೇಂದ್ರ ಸಂಪುಟ ಪುನರ್‌ರಚನೆಗೆ ಕ್ಷಣಗಣನೆ ಆರಂಭಗೊಂಡಿ ರುವಂತಿದೆ. ಗುರುವಾರ ಮಹತ್ವದ ಬೆಳವಣಿಗೆಯೊಂದರಲ್ಲಿ ಸಹಾಯಕ ಕೌಶಲ್ಯಾಭಿವೃದ್ಧಿ ಸಚಿವ ರಾಜೀವ ಪ್ರತಾಪ್ ರುಡಿ ಅವರಿಗೆ ತನ್ನ ಹುದ್ದೆಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ.

ಲೋಕಸಭೆಯಲ್ಲಿ ಬಿಹಾರದ ಸರನ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರುಡಿ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರಿಗೆ ಪಕ್ಷದ ಸಂಘಟನಾತ್ಮಕ ಕಾರ್ಯಕ್ಕೆ ನಿಯೋಜಿಸುವ ಸಾಧ್ಯತೆಯಿದೆ.

ಸಚಿವರಾದ ಮಹೇಂದ್ರನಾಥ ಪಾಂಡೆ, ಸಂಜೀವ ಬಲ್ಯಾನ್, ಕಾಲರಾಜ್ ಮಿಶ್ರಾ ಮತ್ತು ಫಗನ್ ಸಿಂಗ್ ಕುಲಸ್ತೆ ಅವರಿಗೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈ ಸಚಿವರೊಂದಿಗೆ ಪ್ರತ್ಯೇಕ ಸಭೆಯೊಂದನ್ನು ನಡೆಸಿದ್ದರು. ನಿರ್ಮಲಾ ಸೀತಾರಾಮನ್ ಮತ್ತು ಉಮಾ ಭಾರತಿ ಅವರು ಸಂಪುಟದಿಂದ ಕೈಬಿಡಲು ಪರಿಶೀಲಿಸಲಾಗುತ್ತಿರುವ ಇತರ ಹಿರಿಯ ಸಚಿವರಾಗಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರ ದಿಲ್ಲಿಗೆ ವಾಪಸಾಗಲಿದ್ದು, ಸಂಜೆ ಸಂಪುಟ ಪುನರ್‌ರಚನೆಯಾಗುವ ಸಾಧ್ಯತೆಗಳಿವೆ. ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನಗಳ ಕೆಲವು ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರವಿವಾರ ಮಧ್ಯಾಹ್ನ ಚೀನಾಕ್ಕೆ ಪ್ರಯಾಣಿಸಲಿದ್ದಾರೆ.

ಶಾ ಅವರು ಗುರುವಾರ ಸಂಜೆ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಎನ್‌ಡಿಎಗೆ ಸೇರಲಿದೆ ಎನ್ನಲಾಗಿರುವ ಎಐಎಡಿಎಂಕೆ ನಾಯಕ ಎಂ.ತಂಬಿದುರೈ ಅವರೊಂದಿಗೂ ಶಾ ಚರ್ಚೆಗಳನ್ನು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News