ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ ನದಿ ಜೋಡಣೆ ಯೋಜನೆಗೆ ಸದ್ಯದಲ್ಲೇ ಚಾಲನೆ

Update: 2017-09-01 08:50 GMT

ದೌಧನ್, ಸೆ.1: ದೇಶವನ್ನು ಕಾಡುವ ಹಲವು ಭಯಾನಕ ನೆರೆ ಮತ್ತು ಬರ ಪರಿಸ್ಥಿತಿಗಳಿಗೆ ಅಂತ್ಯ ಹಾಡುವ ನಿಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆಯಾದ ಹಲವು ಪ್ರಮುಖ ನದಿಗಳ ಜೋಡಣೆ ಯೋಜನೆಯನ್ನು 87 ಬಿಲಿಯನ್ ಡಾಲರ್ ವೆಚ್ಚದಲ್ಲಿ ಮುಂದಿನ ಒಂದು ತಿಂಗಳೊಳಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಗಂಗಾ ನದಿ ಸೇರಿದಂತೆ 60 ಪ್ರಮಖ ನದಿಗಳನ್ನು ಜೋಡಿಸುವ ಯೋಜನೆ ಇದಾಗಿದ್ದು ರೈತರು ಮಳೆಯನ್ನೇ ಅವಲಂಬಿಸುವ ಪದ್ಧತಿಯನ್ನು ನಿಲ್ಲಿಸಿ ಲಕ್ಷಗಟ್ಟಲೆ ಹೆಕ್ಟೇರ್ ಕೃಷಿಯೋಗ್ಯ ಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಇರಾದೆಯಿದೆ. ಇತ್ತೀಚಿನ ಕೆಲ ವಾರಗಳಲ್ಲಿ ಭಾರತ ಮತ್ತು ನೆರೆಯ ಬಾಂಗ್ಲಾದೇಶ ಮತ್ತು ನೇಪಾಳದ ಹಲವು ಭಾಗಗಳು ಎರಡು ವರ್ಷಗಳ ಕಡಿಮೆ ಮಳೆಯ ನಂತರ ಭಾರೀ ನೆರೆ ಸಮಸ್ಯೆಗೆ ತುತ್ತಾಗಿದ್ದವು.

ಮೊದಲ ಹಂತದ ನದಿ ಜೋಡಣೆಯಿಂದ ಸಾವಿರಾರು ಮೆಗಾವ್ಯಾಟ್ ವಿದ್ಯುತ್ ಕೂಡ ಉತ್ಪಾದಿಸಲಾಗುವುದಲ್ಲದೆ ಕರ್ನಾವತಿ ನದಿಗಡ್ಡಲಾಗಿ ಜಲಾಶಯವೊಂದನ್ನೂ ನಿರ್ಮಿಸಲಾಗುವುದು ಹಾಗೂ ಈ ನದಿಯನ್ನು ಬೆಟ್ವಾ ನದಿಯೊಂದಿಗೆ ಜೋಡಿಸಲಾಗುವುದು. ಎರಡೂ ನದಿಗಳು ಬಿಜೆಪಿ ಆಡಳಿತರುವ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಹರಿಯುತ್ತವೆ.

ಈ ಕರ್ನಾವತಿ-ಬೆಟ್ವಾ ನದಿ ಜೋಡಣೆ ಯೋಜನೆಯ ನಂತರ ಇತರ ನದಿ ಜೋಡಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪ್ರಧಾನಿ ಮೋದಿಯ ಮುತುವರ್ಜಿಯಿಂದ ಈ ಯೋಜನೆಗೆ ಅಗತ್ಯ ಪರಿಸರ ಅನುಮತಿಗಳು ದೊರೆತಿವೆ. ಒಂದೆರಡು ವಾರಗಳಲ್ಲಿ ಸರಕಾರ ಯೋಜನೆಗೆ ಹಸಿರು ನಿಶಾನೆ ತೋರಿಸುವ ಸಾಧ್ಯತೆಯಿದೆ.

ಕರ್ನಾವತಿ ಅಥವಾ ಕೆನ್ ನದಿಗಡ್ಡಲಾಗಿ ನಿರ್ಮಾಣಗೊಳ್ಳಲಿರುವ 77 ಮೀ. ಎತ್ತರದ 2 ಕಿ.ಮೀ. ಉದ್ದದ ಜಲಾಶಯದಿಂದ 9,000 ಹೆಕ್ಟೇರ್ ಭೂಮಿ ಮುಳುಗಡೆಯಾಗುವುದು. ಇದರಲ್ಲಿ ಹೆಚ್ಚಿನ ಭೂಮಿ ಅರಣ್ಯ ಪ್ರದೇಶದಲ್ಲಿದೆ ಹಾಗೂ ಇದು ಪನ್ನಾ ಹುಲಿ ಸಂರಕ್ಷಣಾ ವಲಯದಲ್ಲೂ ಹಾದು ಹೋಗುವುದು. ಈ ಪ್ರದೇಶ ಯುನೆಸ್ಕೋ ಪಾರಂಪರಿಕ ತಾಣವಾದ ಮಧ್ಯಪ್ರದೇಶದ ಖಜುರಾಹೋ ದೇವಳದ ಪಕ್ಕದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News