ರವಿವಾರ ಬೆಳಗ್ಗೆ ಕೇಂದ್ರ ಸಚಿವ ಸಂಪುಟ ಪುನರ್ರಚನೆ

Update: 2017-09-01 11:02 GMT

ಹೊಸದಿಲ್ಲಿ, ಸೆ.1: ಪ್ರಧಾನಮಂತ್ರಿ ನರೇಂದ್ರ ಮೋದಿ ರವಿವಾರ ಬೆಳಗ್ಗೆ 10 ಗಂಟೆಗೆ ತಮ್ಮ ಸಚಿವ ಸಂಪುಟ ಪುನರ್ರಚನೆ ಮಾಡಲಿದ್ದಾರೆ.

ರವಿವಾರ ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಸರಕಾರದ ಉನ್ನತ ಮೂಲಗಳೂ ತಿಳಿಸಿವೆ.

2014ರಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೂರನೆ ಬಾರಿ ಸಚಿವ ಸಂಪುಟ ಪುನರ್ರಚನೆಯಾಗುತ್ತಿದೆ.

ಗುರುವಾರ ಸಂಜೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಿರುವ ಪ್ರಧಾನಿ ಮೋದಿ ಸಂಪುಟ ಪುನರ್ರಚನೆಯ ಬಗ್ಗೆ ಅಂತಿಮ ಸ್ಪರ್ಶ ನೀಡಿದ್ದಾರೆ. ಎನ್‌ಡಿಎ ಮೈತ್ರಿಪಕ್ಷಗಳಾದ ಜೆಡಿ(ಯು) ಹಾಗೂ ಎಐಎಡಿಎಂಕೆ ಸಂಸದರಿಗೆ ಸಚಿವ ಸ್ಥಾನ ಸಹಿತ ಹಲವು ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ನೀಡಲು ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಐವರು ಕೇಂದ್ರ ಸಚಿವರು ರಾಜೀನಾಮೆ ನೀಡುವ ಮೂಲಕ ಸಂಪುಟ ಪುನರ್ರಚನೆಗೆ ವೇದಿಕೆ ನಿರ್ಮಿಸಿದ್ದಾರೆ. ಕೆಲವು ರಾಜ್ಯ ಸಚಿವರಿಗೆ ಭಡ್ತಿ ನೀಡುವ ನಿರೀಕ್ಷೆಯಿದ್ದು 2019ರ ಲೋಕಸಭಾ ಚುನಾವಣೆ ಹಾಗೂ ಕೆಲವು ರಾಜ್ಯಗಳ ವಿಧಾನಸಭಾಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಪುಟ ರಚನೆ ನಡೆಯಲಿದೆ.

ಹೆಚ್ಚುವರಿ ಖಾತೆಗಳನ್ನು ನಿಭಾಯಿಸುತ್ತಿರುವ ಸಚಿವರ ಭಾರವನ್ನು ತಗ್ಗಿಸುವ ಸಾಧ್ಯತೆಯಿದೆ. ಹಣಕಾಸು ಸಚಿವರಾದ ಅರುಣ್ ಜೇಟ್ಲಿ ರಕ್ಷಣಾ ಖಾತೆಯನ್ನೂ ನಿಭಾಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News