ಅನುಪಮಾ ಗುಲಾಟಿ ಹತ್ಯೆ ಪ್ರಕರಣ: ಪತಿ ರಾಜೇಶ್‌ಗೆ ಜೀವಾವಧಿ ಸಜೆ
ಡೆಹ್ರಾಡೂನ್, ಸೆ.1: ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಡೆಹ್ರಾಡೂನ್ ನ್ಯಾಯಾಲಯ ಶುಕ್ರವಾರ ಐಟಿ ಉದ್ಯೋಗಿ ರಾಜೇಶ್ ಗುಲಾಟಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪತ್ನಿ ಅನುಪಮಾ ಗುಲಾಟಿಯನ್ನು ಭೀಕರವಾಗಿ ಹತ್ಯೆಗೈದ ಪ್ರಕರಣದಲ್ಲಿ ರಾಜೇಶ್ ತಪ್ಪಿತಸ್ಥ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಲಯದ ವಕೀಲ ವಿನೋದ್ ಕುಮಾರ್ ಗುರುವಾರ ತೀರ್ಪು ನೀಡಿದ್ದರು. ರಾಜೇಶ್ ಐಪಿಸಿ ಸೆಕ್ಷನ್ 302(ಹತ್ಯೆ) ಹಾಗೂ 201(ಸಾಕ್ಷ ನಾಶ) ಅಡಿ ತಪ್ಪಿತಸ್ಥರೆಂದು ಸಾಬೀತಾಗಿತ್ತು.
2010ರ ಅಕ್ಟೋಬರ್ 17 ರಂದು ರಾಜೇಶ್ ತನ್ನ ಪತ್ನಿ ಅನುಪಮಾರನ್ನು ಹೊಡೆದು ಸಾಯಿಸಿದ್ದ. ಮೃತದೇಹವನ್ನು ಕತ್ತರಿಸಿ ಫ್ರೀಝರ್‌ನಲ್ಲಿಟ್ಟಿದ್ದ. ದೇಹದ ಕೆಲವು ಭಾಗವನ್ನು ಡೆಹ್ರಾಡೂನ್‌ನ ಹೊರಭಾಗದ ದಟ್ಟ ಅರಣ್ಯದಲ್ಲಿ ಎಸೆದಿದ್ದ. 2010ರಲ್ಲಿ ಪೊಲೀಸರು ಅನುಪಮಾರ ಮೃತದೇಹವನ್ನು ಫ್ರೀಝರ್‌ನಿಂದ ಹೊರತೆಗೆದಿದ್ದರು.
ಅನುಪಮಾರ ಸಹೋದರ ಸುಜನ್ ಪ್ರಧಾನ್ ತಮ್ಮ ಸಹೋದರಿ ನಾಪತ್ತೆಯಾಗಿದ್ದಾರೆಂದು ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು.