×
Ad

ಏಕತೆ, ಸಹೋದರತೆ ಸಂದೇಶ ಸಾರುವ ವಿಶ್ವ ಮಾನವ ಸಮಾಜ ನಿರ್ಮಿಸೋಣ: ಯು.ಟಿ.ಖಾದರ್

Update: 2017-09-01 22:56 IST

ಉಳ್ಳಾಲ, ಸೆ.1: ಉಳ್ಳಾಲದ ಹೆಲ್ಪ್ ಇಂಡಿಯಾ ಸಾಮಾಜಿಕ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಬಕ್ರೀದ್ ಹಬ್ಬವನ್ನು ಸೋಮೇಶ್ವರ ನೆಹರು ನಗರದ ಪಶ್ಚಿಮ್ ರಿಹ್ಯಾಬ್ ಮಾನಸಿಕ ಪುನಶ್ಚೇತನ ಕೇಂದ್ರದ ವಾಸಿಗಳೊಂದಿಗೆ  ಊಟ ವಿತರಿಸಿ ಶುಕ್ರವಾರ ಆಚರಿಸಿದರು.

ಈ ವೇಳೆ ಆಹಾರ ಸಚಿವ ಯು.ಟಿ.ಖಾದರ್ ಮಾತನಾಡಿ, ಯುವ ಜನತೆಯು ಸಮಾಜಕ್ಕೆ ಏನಾದರೂ ಉತ್ತಮ ಮಾಡಬೇಕೆಂದು ಸದುದ್ದೇಶವಿರಿಸಿದಾಗ ಒಳ್ಳೆಯ ಕಾರ್ಯ ನಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಹೆಲ್ಫ್ ಇಂಡಿಯಾ ಸಂಘಟನೆಯು ಕಳೆದ ಹಲವು ವರುಷಗಳಿಂದಲೂ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುವುದರ ಜತೆಗೆ ಅಶಕ್ತರ ಬಾಳಿನ ಆಶಾಕಿರಣವಾಗಿದೆ. ಸಮಾಜದಲ್ಲಿ ಮೇಲು-ಕೀಳೆಂಬ ಭೇಧ ಮರೆತು ಎಲ್ಲರೂ ಏಕತೆ ಸಹೋದರತೆ ಸಂದೇಶ ಸಾರುವ ವಿಶ್ವ ಮಾನವ ಸಮಾಜ ನಿರ್ಮಿಸೋಣವೆಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಮಾತನಾಡಿ, 50 ಕೆ.ಜಿ ಅಕ್ಕಿ ಮೂಟೆಯನ್ನು ಖರೀದಿಸಲು ಶಕ್ತನಿರುವವನಿಗೆ ಮೂಟೆಯನ್ನು ಹೊರಲು ಸಾಧ್ಯವಿಲ್ಲ. ಮೂಟೆಯನ್ನು ಹೊರಲು ಸಾಮಾರ್ಥ್ಯವುಳ್ಳವ ಅಕ್ಕಿಯನ್ನು ಖರೀದಿಸಲು ಶಕ್ತನಾಗಿರುವುದಿಲ್ಲ. ಇಂತಹ ಸಮಾಜದ ನಡುವೆ ಅಶಕ್ತರನ್ನು ಗುರುತಿಸಿ ಅವರಿಗೆ ಅನ್ನ ಕೊಡುತ್ತಿರುವ ಹೆಲ್ಫ್ ಇಂಡಿಯಾ ಸಂಘಟನೆಯು ದೇವರನ್ನೇ ಹತ್ತಿರದಿಂದ ಕಾಣುವ ಕೆಲಸ ನಡೆಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪಶ್ಚಿಮ್ ರಿಹ್ಯಾಬ್ ಚಾರಿಟೇಬಲ್ ಟ್ರಸ್ಟ್‍ನ ನಿರ್ದೇಶಕ ರೋಹಿತ್ , ಎಸಿಪಿ ಕೆ.ರಾಮರಾವ್, ಉಳ್ಳಾಲ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ಕೆ.ಆರ್.ಗೋಪಿಕೃಷ್ಣ, ಉಳ್ಳಾಲ ನಗರಸಭಾ ಸದಸ್ಯ ಉಸ್ಮಾನ್ ಕಲ್ಲಾಪು, ಮುಖಂಡರಾದ ಆಲ್ವಿನ್ ಡಿಸೋಜಾ, ಮುರಳೀಧರ್ ಶೆಟ್ಟಿ ಮೋರ್ಲ, ಹೆಲ್ಫ್ ಇಂಡಿಯಾ ಸ್ಥಾಪಕಾಧ್ಯಕ್ಷರಾದ ರಾಝಿಕ್ ಉಳ್ಳಾಲ್, ಪದಾಧಿಕಾರಿಗಳಾದ ಆಸಿಫ್ ಅಮಾಕೋ, ಝಾಕಿರ್,ಸಿರಾಜ್,ಜಲೀಲ್,ತೌಸೀಫ್,ತನ್ವೀರ್,ಅಶ್ರಫ್ ಮೊದಲಾದವರು ಇದ್ದರು.

    
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News