ಆದಿತ್ಯನಾಥ್ ದ್ವೇಷಭಾಷಣ ಪ್ರಕರಣ: ಮೂಲದಾಖಲೆ ಸಲ್ಲಿಸಲು ಹೈಕೋರ್ಟ್ ಸೂಚನೆ

Update: 2017-09-02 13:32 GMT

ಲಕ್ನೊ, ಸೆ.2: ಗೋರಖ್‌ಪುರದಲ್ಲಿ 2007ರಲ್ಲಿ ಕೋಮುಗಲಭೆಗೆ ಕಾರಣವಾದ ದ್ವೇಷಪೂರಿತ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಮೂಲದಾಖಲೆ ಹಾಗೂ ವಿವರವನ್ನು ಸಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಈ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದಾರೆ.

  ಶುಕ್ರವಾರ ಪ್ರಕರಣದ ಅಂತಿಮ ವಾದ-ವಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣಮುರಾರಿ ಮತ್ತು ಅಖಿಲೇಶ್‌ಚಂದ್ರ ಶರ್ಮ ಅವರನ್ನೊಳಗೊಂಡ ನ್ಯಾಯಪೀಠ , ಪ್ರಕರಣದ ಮುಖ್ಯ ಆರೋಪಿ ಆದಿತ್ಯನಾಥ್ ಸೇರಿದಂತೆ ಆರೋಪಿಗಳ ವಿರುದ್ಧ ಕಾನೂನುಕ್ರಮ ಜರಗಿಸಲು ಅನುಮತಿ ನೀಡಲಾಗದು ಎಂಬ ರಾಜ್ಯಸರಕಾರದ ಮೇ 3ರ ಆದೇಶದ ಪ್ರತಿಯನ್ನು ಕೂಡಾ ಸಲ್ಲಿಸುವಂತೆ ಸೂಚಿಸಿತು . ಮುಂದಿನ ವಿಚಾರಣೆ ನಡೆಯಲಿರುವ ಸೆಪ್ಟೆಂಬರ್ 1ರಂದು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿವರ, ಸರಕಾರ ಹಾಗೂ ಪೊಲೀಸರು ಸಂಗ್ರಹಿಸಿದ ಮೂಲ ದಾಖಲೆ ಸಹಿತ ವಿವರವನ್ನು ಸಲ್ಲಿಸುವಂತೆ ರಾಜ್ಯದ ಅಡ್ವೊಕೇಟ್ ಜನರಲ್ ರಾಘವೇಂದ್ರ ಸಿಂಗ್‌ಗೆ ಸೂಚಿಸಿತು. ಎಲ್ಲಾ ದಾಖಲೆಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂಬ ರಾಘವೇಂದ್ರ ಸಿಂಗ್ ಉತ್ತರದ ಬಗ್ಗೆ ನ್ಯಾಯಪೀಠ ಗಮನ ನೀಡಲಿಲ್ಲ.

 2007ರಿಂದ ನಡೆಯುತ್ತಿರುವ ವಿಚಾರಣೆ ಸಮರ್ಪಕ ಹಾಗೂ ನ್ಯಾಯಯುತ ರೀತಿಯಲ್ಲಿ ನಡೆಯುತ್ತಿಲ್ಲ. ಪ್ರಮುಖ ಆರೋಪಿಯನ್ನು ಇದುವರೆಗೂ ಪೊಲೀಸರು ವಿಚಾರಣೆ ನಡೆಸಿಲ್ಲ. ಪ್ರಮುಖ ಆರೋಪಿ ಈಗ ರಾಜ್ಯದ ಮುಖ್ಯಮಂತ್ರಿ ಆಗಿರುವ ಕಾರಣ ವಿಚಾರಣೆ ಪೂರ್ವಾಗ್ರಹ ಪೀಡಿತವಾಗಿ ನಡೆಯಬಹುದು ಎಂದು ದೂರುದಾರರ ಪರ ವಕೀಲ ಫರ್ಮನ್ ನಖ್ವಿ ನ್ಯಾಯಾಲಯಕ್ಕೆ ತಿಳಿಸಿದರು. ಆರೋಪಿಗಳ ವಿಚಾರಣೆಗೆ ಸರಕಾರ ಅನುಮತಿ ನಿರಾಕರಿಸಿದೆ. ಆದರೆ ಮುಖ್ಯ ಆರೋಪಿಯೇ ಸರಕಾರದ ಮುಖ್ಯಸ್ಥನಾಗಿರುವ ಸಂದರ್ಭ ಇಲ್ಲಿದೆ ಎಂದು ಅವರು ಬೆಟ್ಟುಮಾಡಿದರು.

ಗೋರಖ್‌ಪುರ ನಿವಾಸಿಗಳಾದ ಪರ್ವೇಝ್ ಪರ್ವಾಝ್ ಹಾಗೂ ಅಸದ್ ಹಯಾತ್ ಪ್ರಕರಣದ ದೂರು ನೀಡಿದವರಾಗಿದ್ದಾರೆ. ಗೋರಖ್‌ಪುರವನ್ನು ಸಂಸದನಾಗಿ ಐದು ಬಾರಿ ಪ್ರತಿನಿಧಿಸಿರುವ ಹಾಲಿ ಮುಖ್ಯಮಂತ್ರಿ ಆದಿತ್ಯನಾಥ್, ನಗರದ ಮೇಯರ್ ಅಂಜು ಚೌಧರಿ, ಸ್ಥಳೀಯ ಶಾಸಕ ರಾಧಾ ಮೋಹನ್‌ದಾಸ್ ಅಗರ್‌ವಾಲ್ ಪ್ರಕರಣದ ಆರೋಪಿಗಳಾಗಿದ್ದಾರೆ.

ಆರೋಪಿಗಳ ವಿಚಾರಣೆಗೆ ಸರಕಾರ ಅನುಮತಿ ನಿರಾಕರಿಸಿದ ಕ್ರಮದ ಬಗ್ಗೆ ಮೇಲ್ಮನವಿ ಸಲ್ಲಿಸುವಂತೆ ಕಳೆದ ತಿಂಗಳು ಹೈಕೋರ್ಟ್ ಪೀಠ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News