ಏಕಾಂಗಿತನದ ಬೇಸರ ಕಳೆಯಲು ಇಲಿ ಸಾಕುತ್ತಿರುವ ಮಹಿಳೆ..!

Update: 2017-09-02 13:58 GMT

ಮುಂಬೈ, ಸೆ.2: ಇಲಿಗಳನ್ನು ಮನೆಯಿಂದ ನಿವಾರಿಸುವುದೇ ಬಹುದೊಡ್ಡ ಸಮಸ್ಯೆಯಾಗಿರುವಾಗ, ಮುಂಬೈಯ ಮಹಿಳೆಯೋರ್ವರು ಏಕಾಂಗಿತನದ ಬೇಸರ ಕಳೆಯಲು ತಮ್ಮ ಮನೆಯಲ್ಲಿ 200ಕ್ಕೂ ಹೆಚ್ಚು ಇಲಿಗಳಿಗೆ ಆಶ್ರಯ ನೀಡುತ್ತಿರುವ ವಿಚಿತ್ರ ಘಟನೆ ವರದಿಯಾಗಿದೆ.

 ವಿಲೆಪಾರ್ಲೆ ಸೊಸೈಟಿಯ ಮೂರನೇ ಮಹಡಿಯಲ್ಲಿ ವಾಸಿಸುತ್ತಿರುವ 75ರ ಹರೆಯದ ಶರ್ವರಿ ಆಚಾರ್ಯ ಹಾಗೂ ಆಕೆಯ 42ರ ಹರೆಯದ ಮಗಳು ಶುಭಾನ ಏಕಾಂಗಿತನ ಕಳೆಯಲು ತಮ್ಮ ಮನೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಇಲಿಗಳಿಗೆ ಆಶ್ರಯ ನೀಡಿದ್ದು ಇದರಿಂದ ಈ ಕಟ್ಟಡವಷ್ಟೇ ಅಲ್ಲ, ಸುತ್ತಮುತ್ತಲ ಮನೆಗಳ ನಿವಾಸಿಗಳಿಗೂ ತೊಂದರೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಇರ್ಲಾ ಲೇನ್‌ನಲ್ಲಿರುವ ಸರಸ್ವತಿ ಸೊಸೈಟಿ ಎಂಬ ಮೂರು ಮಹಡಿ ಕಟ್ಟಡವನ್ನು 1969ರಲ್ಲಿ ಸ್ಟೇಟ್‌ಬ್ಯಾಂಕ್‌ನ ಸಿಬಂಧಿಗಳಿಗಾಗಿ ನಿರ್ಮಿಸಲಾಗಿತ್ತು. ಮೂರು ವಿಭಾಗಗಳಲ್ಲಿ 42 ಪ್ಲಾಟ್‌ಗಳನ್ನು ಈ ಕಟ್ಟಡ ಹೊಂದಿದೆ. ಹತ್ತು ವರ್ಷದ ಹಿಂದೆ ಶರ್ವರಿ ಆಚಾರ್ಯರ ಪತಿ ಜಯಂತ್ ಆಚಾರ್ಯ ಹೃದಯಾಘಾತದಿಂದ ನಿಧನ ಹೊಂದಿದ ಬಳಿಕ ಶರ್ವರಿ ಮತ್ತವರ ಪುತ್ರಿ ಶುಭಾನ ಕಂಗೆಟ್ಟಿದ್ದರು. ಬಳಿಕ ಇಬ್ಬರು ಮಹಿಳೆಯರೂ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಕೆಲ ದಿನಗಳ ಬಳಿಕ ನಮ್ಮ ಮನೆಗಳಿಗೆ ಇಲಿಗಳ ಕಾಟ ಜೋರಾಯಿತು. ಬಳಿಕ ಪರಿಶೀಲಿಸಿದಾಗ ಆಚಾರ್ಯರ ಫ್ಲಾಟ್‌ನಲ್ಲಿ ಇಲಿಗಳು ಹಾಯಾಗಿ ಓಡಾಡುತ್ತಿದ್ದುದು ಗಮನಕ್ಕೆ ಬಂದಿದೆ. ಅಲ್ಲಿ ಕನಿಷ್ಟ 200 ಇಲಿಗಳಿವೆ ಎಂದು ಇದೇ ಕಟ್ಟಡದ ನಿವಾಸಿ ತುಷಾರ್ ಸಾಮಂತ್ ಹೇಳಿದ್ದಾರೆ.

ಈ ಬಗ್ಗೆ ಬಿಬಿಎಂಸಿಗೆ ದೂರು ನೀಡಿದಾಗ ಅವರು, ಆ ಮನೆಯಲ್ಲಿ ಮಹಿಳೆಯರು ಮಾತ್ರ ವಾಸಿಸುತ್ತಿರುವ ಕಾರಣ ಪೊಲೀಸರ ಉಪಸ್ಥಿತಿ ಇಲ್ಲದೆ ತಾವು ಕಾರ್ಯಾಚರಣೆ ನಡೆಸುವಂತಿಲ್ಲ ಎಂದು ತಿಳಿಸಿದರು. ಆದರೆ ಪೊಲೀಸರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದು, ಸೊಸೈಟಿ ಮೀಟಿಂಗ್(ವಠಾರದ ಸಭೆ)ಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು. ಸೊಸೈಟಿ ಮೀಟಿಂಗ್‌ನಲ್ಲಿ ಸ್ಥಳೀಯರು ತಮಗೆದುರಾಗಿರುವ ಸಮಸ್ಯೆಯನ್ನು ಪ್ರಸ್ತಾವಿಸಿದಾಗ ಶರ್ವರಿ ಅಸ್ಪಷ್ಟ ಉತ್ತರ ನೀಡುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.

   ಇಲಿಗಳು ನಮ್ಮ ಮಿತ್ರರು. ನಮ್ಮ ಏಕಾಂಗಿತನದ ಬೇಸರ ಕಳೆಯಲು ಅವುಗಳು ನಮ್ಮ ಜೊತೆಯಲ್ಲೇ ವಾಸಿಸುತ್ತಿವೆ ಎಂದು ಶರ್ವರಿ ಆಚಾರ್ಯ ಹೇಳುತ್ತಾರೆ ಎಂದು ನೆರೆಮನೆಯ ವಿವೇಕ್ ಕಿಣಿಕರ್ ಎಂಬವರು ದೂರಿದ್ದಾರೆ. ಎಸ್‌ಬಿಐಯ ಹಿರಿಯ ಅಧಿಕಾರಿಯಾಗಿದ್ದ ಶರ್ವರಿಯ ಪತಿಯನ್ನು ನಾವು ಚೆನ್ನಾಗಿ ಬಲ್ಲೆವು. ಈಗ ತಾಯಿ-ಮಗಳ ಸಮಸ್ಯೆ ಏನೆಂಬುದನ್ನು ಕೇಳಲು ಹೋದರೂ ಅವರು ನಮ್ಮೆಡನೆ ಮಾತಾಡಲೇ ತಯಾರಿಲ್ಲ ಎಂದವರು ಹೇಳುತ್ತಾರೆ.

 ಕಳೆದ ವಾರ ಬಿಬಿಎಂಸಿಯವರು ಎರಡು ಇಲಿ ಬೋನ್‌ಗಳನ್ನು ಈ ಕಟ್ಟಡದಲ್ಲಿಟ್ಟಿದ್ದು ಸುಮಾರು 60ರಷ್ಟು ಇಲಿಗಳನ್ನು ಹಿಡಿದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News