ನ.11ರಂದು ಮೂಡುಬಿದಿರೆಯಲ್ಲಿ ವಿಜಯೋತ್ಸವದ ಕಂಬಳ
ಮೂಡುಬಿದಿರೆ, ಸೆ.2: ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಮೂಡುಬಿದಿರೆ ಸ್ವರ್ಣ ಮಂದಿರದಲ್ಲಿ ನಡೆದ ಮಹಾಸಭೆಯಲ್ಲಿ ಕಂಬಳ ಉಳಿಸಿ, ಮುಂದುವರಿಸುವ ಕುರಿತು ಚರ್ಚೆ, ಸಮಾಲೋಚನೆ ನಡೆಯಿತು.
ಕಂಬಳ ವೇಳಾಪಟ್ಟಿ ಹಾಗೂ ಕಂಬಳ ಕುರಿತ ಮುಂದಿನ ನಡೆಯ ಬಗ್ಗೆ ಸೆ. 24ರಂದು ಮೂಡುಬಿದಿರೆಯ ಸಮಾಜಮಂದಿರದಲ್ಲಿ ಸಮಾಲೋಚನೆ ಸಭೆಯನ್ನು ಹಮ್ಮಿಕೊಳ್ಳುವುದು, ನ.11ರಂದು ಮೂಡುಬಿದಿರೆಯಲ್ಲಿ ವಿಜಯೋತ್ಸವ ಕಂಬಳ ಮಾಡುವುದಾಗಿ ಕರಾವಳಿಯ ದ.ಕ., ಉಡುಪಿ, ಕಾಸರಗೋಡು ಮೂರು ಜಿಲ್ಲೆಗಳನ್ನೊಳಗೊಂಡ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ ಮಾತನಾಡಿ, ಕಂಬಳಕ್ಕೆದುರಾದ ಅಡೆತಡೆಗಳು ಸದ್ಯಕ್ಕೆ ದೂರವಾಗಿದ್ದರೂ ಮುಂದಿನ ಒಂದು ವರ್ಷ ಶಿಸ್ತುಬದ್ಧವಾಗಿ ಕಂಬಳ ನಡೆಸಬೇಕು. ಕಾನೂನು ತೊಡಕುಗಳಲ್ಲಿ ಬಾಕಿಯಿರುವ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಶಾಸಕ, ಮೂಡುಬಿದಿರೆ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕರಾವಳಿಯ ಸಾಂಸ್ಕೃತಿಕ ಜಾನಪದ ಕ್ರೀಡೆ ಕಂಬಳ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ ಎಲ್ಲರೂ ಒಂದಾಗಿ ಹೋರಾಡಿದಲ್ಲಿ ಪರಿಶ್ರಮ ಸಾರ್ಥಕವಾಗುತ್ತದೆ. ಸರಕಾರದಿಂದ ಉಳಿದಿರುವ ಬಾಕಿ ಕೆಲಸಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಪೂರ್ಣಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಭಾಸ್ಕರ ಕೋಟ್ಯಾನ್ ಮಾತನಾಡಿ, ಕಂಬಳಕ್ಕೆ ಸಂಬಂಧಿತ ಕಾರ್ಯಕ್ರಮಗಳ ರೂಪುರೇಷೆಗಳನ್ನು ಅದರ ಬಗ್ಗೆ ಏನೂ ಅರಿವಿಲ್ಲದವರು ತೀರ್ಮಾನಿಸುವಂತಾಗಬಾರದು. ಕಂಬಳದ ನಡೆಸುವವರು ಹಾಗೂ ಕೋಣಗಳ ಯಜಮಾನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೇಳಾಪಟ್ಟಿ ತಯಾರಿಸಬೇಕು. ಸಮಿತಿಯಲ್ಲಿ ಹೊಂದಾಣಿಕೆ ಅಗತ್ಯವಾಗಿದ್ದು, ಇದು ಕಂಬಳದ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು.
ಹಾಲಿ ಅಧ್ಯಕ್ಷ ಶಾಂತರಾಮ ಶೆಟ್ಟಿ ಅವರನ್ನು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾಗಿ ಪುನಾರಯ್ಕೆಯಾದರು.ಈಗಿರುವ ಸಮಿತಿಯ ಪದಾಧಿಕಾರಿಗಳನ್ನೇ ಮುಂದುವರಿಸುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಸಮಿತಿಯ ಕೋಶಾಧಿಕಾರಿ ಪಿ.ಆರ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎನ್.ವಿಜಯ ಕುಮಾರ್ ಕಂಗಿನಮನೆ, ಉಪಾಧ್ಯಕ್ಷರಾದ ಡಾ.ದೇವಿಪ್ರಸಾದ್ ಶೆಟ್ಟಿ ಐಕಳ, ರಾಯಿ ಶೀತಲ ರಾಜೇಶ್ ಶೆಟ್ಟಿ , ಅನಿಲ್ ಶೆಟ್ಟಿ ಜಪ್ಪುಮಂಕು, ಬೆಳ್ಳಿಪ್ಪಾಡಿ ಕೇಶವ ಭಂಡಾರಿ, ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ಭಟ್ ಏರಿಮಾರು, ಸುಧೇಶ್ ಕುಮಾರ್ ಅರಿಗ ಬಂಗಾಡಿ, ತೀರ್ಪುಗಾರರ ಸಂಚಾಲಕರಾದ ರವೀಂದ್ರ ಕುಮಾರ್ ಕಕ್ಕುಂದೂರು ಸಹಿತ ಸದಸ್ಯರು ಉಪಸ್ಥಿತರಿದ್ದರು.