ಬಾಹ್ಯಾಕಾಶದಲ್ಲಿ 288 ದಿನಗಳನ್ನು ಕಳೆದು ಭೂಮಿಗೆ ಮರಳಲಿರುವ ನಾಸಾ ಗಗನಯಾನಿ

Update: 2017-09-02 14:13 GMT

ವಾಶಿಂಗ್ಟನ್, ಸೆ. 2: ಬಾಹ್ಯಾಕಾಶದಲ್ಲಿ ಸುದೀರ್ಘ ಅವಧಿ ವಾಸಿಸಿದ ಅಮೆರಿಕನ್ ಎಂಬ ದಾಖಲೆಯನ್ನು ಹೊಂದಿರುವ ನಾಸಾ ಖಗೋಳಯಾನಿ ಪೆಗ್ಗಿ ವಿಟ್ಸನ್, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 288 ದಿನಗಳನ್ನು ಕಳೆದು ಶನಿವಾರ ಭೂಮಿಗೆ ಮರಳಲಿದ್ದಾರೆ.

ವಿಟ್ಸನ್ ಮತ್ತು ಅವರ ‘ಎಕ್ಸ್‌ಪೆಡಿಶನ್ 52’ ತಂಡದ ಸದಸ್ಯರಾದ ನಾಸಾ ಗಗನಯಾತ್ರಿ ಜಾಕ್ ಫಿಶರ್ ಮತ್ತು ರಶ್ಯ ಬಾಹ್ಯಾಕಾಶ ಸಂಸ್ಥೆ ‘ರಾಸ್ಕಾಸ್ಮಾಸ್’ನ ಫಯೊಡೊರ್ ಯುರ್ಚಿಖಿನ್ ಕಝಕ್‌ಸ್ತಾನದಲ್ಲಿ ಸ್ಥಳೀಯ ಸಮಯ ಶನಿವಾರ ರಾತ್ರಿ 9:22ಕ್ಕೆ (ಭಾರತೀಯ ಸಮಯ ರವಿವಾರ ಬೆಳಗ್ಗೆ 6:52) ಇಳಿಯಲಿದ್ದಾರೆ.

 ಭೂಮಿಯಲ್ಲಿ ಇಳಿಯುವ ವೇಳೆಗೆ ವಿಟ್ಸನ್, ತನ್ನ ವೃತ್ತಿಜೀವನದ 665 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿರುತ್ತಾರೆ. ಇದು ಅಮೆರಿಕ ಯಾತ್ರಿಗಳಲ್ಲೇ ಅಧಿಕವಾಗಿದೆ ಹಾಗೂ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ದಿನಗಳನ್ನು ಕಳೆದವರ ಸಾರ್ವಕಾಲಿಕ ಪಟ್ಟಿಯಲ್ಲಿ ಅವರು ಎಂಟನೆ ಸ್ಥಾನದಲ್ಲಿದ್ದಾರೆ.

ಇದು ಅವರ ಮೂರನೆ ಅವಧಿಯ ಸುದೀರ್ಘ ಬಾಹ್ಯಾಕಾಶ ವಾಸವಾಗಿದೆ.

ಉಕ್ಕಿನ ಮಹಿಳೆ!

ವಿಟ್ಸನ್ ಕಳೆದ ವರ್ಷದ ನವೆಂಬರ್ 17ರಂದು ಬಾಹ್ಯಾಕಾಶಕ್ಕೆ ಹಾರಿದ್ದರು. ಆ ವೇಳೆಗಾಗಲೇ ಬಾಹ್ಯಾಕಾಶದಲ್ಲಿ ಒಟ್ಟು 377 ದಿನಗಳನ್ನು ಕಳೆದ ಸಾಧನೆ ಅವರ ಹೆಸರಲ್ಲಿತ್ತು. ಎಪ್ರಿಲ್ 24ರಂದು ಅವರು ಬಾಹ್ಯಾಕಾಶದಲ್ಲಿ ಗರಿಷ್ಠ ಸಂಖ್ಯೆಯ ದಿನಗಳನ್ನು ಕಳೆದ ಅಮೆರಿಕನ್ ಎಂಬ ಜೆಫ್ ವಿಲಿಯಮ್ಸ್ ಎಂಬವರ ದಾಖಲೆಯನ್ನು ಮುರಿದರು. ವಿಲಿಯಮ್ಸ್ ಆ ವೇಳೆಗೆ 534 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದರು.

ಗರಿಷ್ಠ ‘ಬಾಹ್ಯಾಕಾಶ ನಡಿಗೆ’ಗಳನ್ನು ನಿರ್ವಹಿಸಿದ ಮಹಿಳೆ ಎಂಬ ದಾಖಲೆಯೂ ಅವರ ಹೆಸರಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News