×
Ad

ಶಿವಪುರ ಕಲ್ಮುಂಡ ಕ್ರಷರ್ ಸ್ಥಗಿತಕ್ಕೆ ಡಿಸಿ ಆದೇಶ

Update: 2017-09-02 20:12 IST

ಉಡುಪಿ, ಸೆ. 2: ಪರಿಸರ ಮಾಲಿನ್ಯ ಹಾಗೂ ಸ್ಥಳೀಯರ ಆರೋಗ್ಯಕ್ಕೆ ಮಾರಕವಾಗಿರುವ ಶಿವಪುರ ಗ್ರಾಪಂ ವ್ಯಾಪ್ತಿಯ ಕಲ್ಮುಂಡ ಮೂಕಾಂಬಿಕಾ ಜಲ್ಲಿ ಕ್ರಷರ್ ಹಾಗೂ ಮೂಕಾಂಬಿಕಾ ಹೋಲೊ ಬ್ಲಾಕ್ ಇಂಡಸ್ಟ್ರೀಸ್‌ನ್ನು ಕೂಡಲೇ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಕಾರ್ಕಳ ತಹಶೀಲ್ದಾರ್ ಗುರುಪ್ರಸಾದ್ ಅವರಿಗೆ ಆದೇಶ ನೀಡಿದ್ದಾರೆ.

ಗಣಿಗಾರಿಕೆಯ ಕುರಿತಂತೆ ಶುಕ್ರವಾರ 'varthabharati.in' ವಿಶೇಷ ವರದಿ ಪ್ರಕಟಿಸಿತ್ತು.

ಈ ಕಲ್ಲು ಗಣಿಗಾರಿಕೆಯಿಂದ ತೊಂದರೆಗೊಳಗಾಗಿ ಬಸವಳಿದಿರುವ ಶಿವಪುರ ಗ್ರಾಪಂ ವ್ಯಾಪ್ತಿಯ ಯಳಗೋಳಿ, ಕಲ್ಮುಂಡ ಗ್ರಾಮಗಳ ಗ್ರಾಮಸ್ಥರು ತಮ್ಮ ಸಂಕಷ್ಟಗಳನ್ನು ವಿವರಿಸಿ ಈ ಕ್ರಷರ್‌ನ್ನು ಮುಚ್ಚುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ ಮಧ್ವರಾಜ್ ಹಾಗೂ ಜಿಲ್ಲಾಧಿಕಾರಿಗೆ ನೀಡಿದ ಮನವಿಯ ಹಿನ್ನೆಲೆಯಲ್ಲಿ ಸಚಿವರು ನೀಡಿದ ಸೂಚನೆಯಂತೆ ಜಿಲ್ಲಾಧಿಕಾರಿ ಈ ಆದೇಶ ನೀಡಿದ್ದಾರೆ.

ಈ ಕ್ರಷರ್‌ನಲ್ಲಿ ಕಳೆದ ತಿಂಗಳು ನಡೆದ ಅಪಘಾತದಿಂದ ಇಬ್ಬರು ಮೃತಪಟ್ಟಿದ್ದು, ಆ ಬಗ್ಗೆ ವಿಚಾರಣೆ ನಡೆಯುತ್ತಿದೆ. ಅಲ್ಲದೇ ಎರಡು ವರ್ಷಗಳ ಹಿಂದೆ ಉಪಲೋಕಾಯುಕ್ತರು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಆದೇಶ ನೀಡಿದ್ದರು. ಇದರೊಂದಿಗೆ ಇಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕ್ರಷಿಂಗ್ ನಡೆಯುತ್ತಿರುವ ದೂರುಗಳಿದ್ದು, ಈ ಎಲ್ಲವುಗಳ ಕುರಿತೂ ತನಿಖೆ ನಡೆದು, ಪರಿಶೀಲಿಸುವವರೆಗೆ ಗಣಿಗಾರಿಕೆಯನ್ನು ಸಂಪೂರ್ಣ ವಾಗಿ ಮುಚ್ಚುವಂತೆ ಸೂಚನೆಗಳನ್ನು ನೀಡಿರುವುದಾಗಿ ಜಿಲ್ಲಾಧಿಕಾರಿಗಳು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಕಳೆದ ಸುಮಾರು 24 ವರ್ಷಗಳಿಂದ ನಡೆಯುತ್ತಿರುವ ಈ ಕ್ರಷರ್‌ನಿಂದಾಗಿ ಗಣಿಗಾರಿಕೆ ನಡೆಯುವ ಆಸುಪಾಸಿನ ಯಳಗೋಳಿ, ಕಲ್ಮುಂಡ, ಕುಂಟೆಬೆಟ್ಟು ಪ್ರದೇಶದ ನೂರಾರು ಮನೆಗಳಲ್ಲಿ ವಾಸವಾಗಿರುವ ಕುಟುಂಬಗಳ ಬದುಕಿಗೆ ಸಮಸ್ಯೆ ಎದುರಾಗಿದೆ. ಧೂಳಿನಿಂದ ಸಾಕಷ್ಟು ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅದರಲ್ಲೂ ಯಳಗೋಳಿ ಗ್ರಾಮದಲ್ಲಿರುವ 40-45 ಮನೆಯವರ ಬದುಕಂತೂ ನರಕಸದೃಶ್ಯವಾಗಿದೆ ಎಂದು ಉದಯ ಶೆಟ್ಟಿ ನೇತೃತ್ವದಲ್ಲಿ ಮನವಿ ಅರ್ಪಿಸಿದ ಯಳಗೋಳಿ ಗ್ರಾಮಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News