ಶಿರ್ತಾಡಿ : ಕಾರ್ಮಿಕ ಮುಖಂಡನಿಂದ ಅಮರಣಾಂತ ಉಪವಾಸ ಸತ್ಯಾಗ್ರಹ

Update: 2017-09-02 15:38 GMT

ಶಿರ್ತಾಡಿ, ಸೆ. 2: 24 ಗಂಟೆ ವೈದ್ಯಕೀಯ ಸೇವೆ, ರಕ್ತ ಪರೀಕ್ಷಾ ಕೇಂದ್ರ, ಇಬ್ಬರು ವೈದ್ಯರನ್ನು ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡುವಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯನ್ನು ಆಗ್ರಹಿಸಿ ಕಾರ್ಮಿಕ ಮುಖಂಡ ಸುದತ್ತ ಜೈನ್ ಅನಿರ್ಧಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹ ಸೆ.1ರಂದು ಆರಂಭಿಸಿದ್ದು ಎರಡನೇ ದಿನವೂ ಮುಂದುವರಿದಿದೆ.

ಉಪವಾಸ ಸತ್ಯಾಗ್ರಹ ಆರಂಭಿಸಿದ ಮೊದಲ ದಿನವೇ ಜಿಲ್ಲಾ ಆರೋಗ್ಯ ಅಧಿಕಾರಿ ಸುದತ್ತ ಜೈನ್ ಅವರನ್ನು ಭೇಟಿಯಾಗಿ ಚರ್ಚಿಸಿ ಹಲವು ಭರವಸೆಗಳನ್ನು ನೀಡಿದ್ದಾರೆ. ಈ ಸಂದರ್ಭ ಪಟ್ಟು ಬಿಡದ ಸುದತ್ತ ಜೈನ್ ಯಾವುದೇ ಕಾರಣಕ್ಕೂ ಬೇಡಿಕೆ ಈಡೇರದೆ ಉಪವಾಸ ಹಿಂತೆಗೆದುಕೊಳ್ಳುವುದಲ್ಲ. ನೀವು ಏನೇ ಭರವಸೆ ನೀಡುವುದಿದ್ದರೂ ಮೌಖಿಕವಾಗಿ ಬೇಡ. ಲಿಖಿತವಾಗಿ ನೀಡಿ ಎಂದರು.

ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಗರಿಷ್ಟ ಪ್ರಯತ್ನ ಮಾಡಿ ಆಸ್ಪತ್ರೆಗೆ ಹಲವು ಅನುಕೂಲಗಳನ್ನು ಕಲ್ಪಿಸಿರುವ ಬಗ್ಗೆ ವಿವರಣೆ ನೀಡಿದ ಆರೋಗ್ಯಧಿಕಾರಿ ಸುದತ್ತ ಜೈನ್ ಮನವೊಲಿಸುವಲ್ಲಿ ವಿಫಲರಾದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸುದತ್ತ ಜೈನ್ ಈ ಹಿಂದೆಯೂ ಸರಕಾರಿ ಆಸ್ಪತ್ರೆಯ ದುರವಸ್ಥೆ ವಿರುದ್ಧ ಸತ್ಯಾಗ್ರಹ ನಡೆಸಿದ್ದು ಆಗಲೂ ಅಧಿಕಾರಿಗಳು ಬೇಡಿಕೆ ಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ದಿನಕಳೆದಂತೆ ಇವರ ಭರವಸೆ ಪೊಳ್ಳು ಎಂಬುದು ನನಗೆ ಮನವರಿಕೆಯಾಗಿದೆ. ಅದಕ್ಕಾಗಿ ಇದೀಗ ಯಾರೇ ಭರವಸೆ ನೀಡುವುದಿದ್ದರೂ ಲಿಖಿತವಾಗಿ ನೀಡುವಂತೆ ಕೇಳಿದ್ದೇನೆ. ಗ್ರಾಮೀಣ ಪ್ರದೇಶದ ಜನರಿಗೆ ಸರಕಾರದ ಕಡೆಯಿಂದ ಲಭ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಹಾಗೂ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.

ಶಿರ್ತಾಡಿ ಆಸುಪಾಸಿನ ಬಡ ಕಾರ್ಮಿಕ ವರ್ಗ, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು, ಆಟೋ ಹಾಗೂ ಟ್ಯಾಕ್ಸಿ ಚಾಲಕರು ಮತ್ತು ಘನವಾಹನ ಚಾಲಕರು ಸೇರಿದಂತೆ ಎಲ್ಲ ವರ್ಗದ ಬಡವರಿಗೆ ಇರುವ ಒಂದೇ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸಾ ಸೌಲಭ್ಯವಿಲ್ಲದೇ ಇರುವುದು ದುರಂತ. ದಿನದ 24 ಗಂಟೆ ವೈದ್ಯರು ಲಭ್ಯರಿರುವುದಿಲ್ಲ. ರಕ್ತಪರೀಕ್ಷಾ ಕೇಂದ್ರ ಇಲ್ಲ. ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಈ ಆಸ್ಪತ್ರೆಗೆ ನೀಡಬೇಕು ಮತ್ತು ಈ ಕೇಂದ್ರವನ್ನು ಸರಕಾರ ಮೇಲ್ದರ್ಜೆಗೇರಿಸಬೇಕು ಎಂದು ಸುದತ್ತ ಆಗ್ರಹಿಸಿದ್ದಾರೆ.

ಪ್ರಶಾಂತ್ ವಾಲ್ಪಾಡಿ, ನಾರಾಯಣ ಕುಕ್ಕುದಕಟ್ಟೆ, ವಸಂತ ಕೊಣಾಜೆ, ಲ್ಯಾನ್ಸಿ ಪಿಂಟೋ, ಲಕ್ಷ್ಮಣ ಕೊಣಾಜೆ, ಅಬೂಬಕ್ಕರ್ ಶಿರ್ತಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News