×
Ad

ಪಾವೂರು: ಹೆಣ್ಮಕ್ಕಳ ಸಮಾಲೋಚನ ಕೊಠಡಿ ಉದ್ಘಾಟನೆ

Update: 2017-09-02 21:50 IST

ಕೊಣಾಜೆ, ಸೆ. 2: ಸಂಘ-ಸಂಸ್ಥೆಗಳು, ಟ್ರಸ್ಟ್‌ಗಳು ಬಡ ಮಕ್ಕಳು ಕಲಿಯುವಂತಹ ಸರ್ಕಾರಿ ಶಾಲೆಗಳ ಪರವಾಗಿ ಯೋಜನೆಗಳನ್ನು ರೂಪಿಸಬೇಕಿದ್ದು, ಆ ನಿಟ್ಟಿನಲ್ಲಿ ರಮ್ಲಾನ್ ಹಾಜಿ ಟ್ರಸ್ಟ್ ಪದಾಧಿಕಾರಿಗಳ ಉದಾರ ಮನಸ್ಸು ಇತರ ಸಂಘಟನೆಗಳಿಗೆ ಮಾದರಿ ಎಂದು ತಾಲೂಕು ಪಂ. ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಅಭಿಪ್ರಾಯಪಟ್ಟರು.

ಪಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಮ್ಲಾನ್ ಹಾಜಿ ಟ್ರಸ್ಟ್ ಸಹಕಾರದಲ್ಲಿ ನಿರ್ಮಿಸಲಾದ ಹದಿಹರೆಯದ ಹೆಣ್ಮಕ್ಕಳ ಸಮಾಲೋಚನಾ ಕೊಠಡಿ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ ಮಲಾರ್ ಸೆಂಟ್ರಲ್ ಮುಸ್ಲಿಂ ಅನುದಾನಿತ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಚ್.ಎಂ.ಮಹಮ್ಮದ್ ಮಾತನಾಡಿ, ಪುಸ್ತಕಗಳು ಜ್ಞಾನ ವೃದ್ಧಿಸುವುದರಿಂದ ಅವುಗಳನ್ನು ಮಡಿಚಿಡದೆ ಪ್ರತಿದಿನ ಓದುವ ಕೆಲಸ ವಿದ್ಯಾರ್ಥಿಗಳಿಂದಾಗಬೇಕು. ಹಿರಿಯರನ್ನು ಕಂಡಾಗ ಗೌರವ ಭಾವನೆ ತೋರಬೇಕಿದ್ದು ಈ ವಿಚಾರದಲ್ಲಿ ಜಾತಿ, ಧರ್ಮದ ಅಡ್ಡಗೋಡೆ ಅನಗತ್ಯ. ಹೆತ್ತವರು ಪ್ರತ್ಯಕ್ಷ ದೇವರಾಗಿದ್ದು ಅವರೊಂದಿಗೆ ಗೌರವ, ಮಾರ್ಗದರ್ಶನ ಪಡೆದು ಮುಂದುವರಿದಾಗ ಜೀವನ ಸದಾ ಯಶಸ್ಸಿನೊಂದಿಗೆ ಸಾಗಲು ಸಾಧ್ಯ ಎಂದು ತಿಳಿಸಿದರು.

ಮೂರು ವರ್ಷದ ಹಿಂದೆ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಸಂಗ್ರಹಿಸುವುದನ್ನು ಕಂಡಾಗ ಬೇಸರವಾಗಿ ನೆರವು ನೀಡುವ ಸಲುವಾಗಿ ಟ್ರಸ್ಟ್ ಆರಂಭಿಸಲಾಗಿದೆ. ಈಗ ಶಿಕ್ಷಣ ಪಡೆಯುವ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೇರಬಹುದು, ಆ ಸಂದರ್ಭ ಕಲಿತ ಶಾಲೆಗಳನ್ನು ಎಂದಿಗೂ ಮರೆಯಬಾರದು ಎಂದು ಟ್ರಸ್ಟ್‌ನ ನಿರ್ದೇಶಕ ಜೀಶಾನ್ ರಮ್ಲಾನ್ ಕಿವಿವಾತು ಹೇಳಿದರು.

ಕಾರ್ಯಕ್ರಮದಲ್ಲಿ 37 ವರ್ಷ ಶಿಕ್ಷಕ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಎಚ್.ಎಂ.ಮಹಮ್ಮದ್ ಅವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು.

ಕೊಣಾಜೆ ವಲಯ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಶಂಕರಾನಂದ ಎನ್.ಇನವಳ್ಳಿ, ಪಾವೂರು ಗ್ರಾಮ ಪಂಚಾಯಿತಿ ಸದಸ್ಯ ಐ.ಬಿ.ಸಾಧಿಕ್, ಗುತ್ತಿಗೆದಾರ ವಿನ್ಸೆಂಟ್ ಲೋಬೋ, ಟ್ರಸ್ಟ್‌ನ ಸ್ಥಾಪಕ ಶಮೀರ್ ರಮ್ಲಾನ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸರಸ್ವತಿ, ಶಿವಪ್ಪ, ಅಲ್ತಾಫ್ ಅಹ್ಮದ್ ಮಲಾರ್, ಸಕೀನ, ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಡಾ.ಪ್ರಶಾಂತ್ ಕುಮಾರ್ ಕೆಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಶಿಕ್ಷಕಿ ಜಮೀಲಾ ಕಾರ್ಯಕ್ರಮದ ಮಾಹಿತಿ ನೀಡಿದರು. ಆಂಗ್ಲ ಶಿಕ್ಷಕಿ ಪ್ರಮೀಳಾ ಒಲಿವಿಯಾ ಮೊಂತೆರೋ ವಂದಿಸಿದರು. ವಿಜ್ಞಾನ ಶಿಕ್ಷಕಿ ಆಶಾವೀರಾವಾಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News