×
Ad

ಮನೆ ಕಳೆದುಕೊಂಡ ಕಲಾವಿದನಿಗೆ ಪಟ್ಲ ಫೌಂಡೇಶನ್‌ನಿಂದ ಮನೆ ನಿರ್ಮಾಣ

Update: 2017-09-02 21:56 IST

ಕೊಣಾಜೆ, ಸೆ. 2: ಇತ್ತೀಚಿನ ಮಳೆಗೆ ಮನೆ ಕಳೆದುಕೊಂಡಿದ್ದ ಯಕ್ಷಗಾನ ಕಲಾವಿದ ಕೊಣಾಜೆಯ ದೇವಪ್ಪ ಗೌಡ ರಿಗೆ ನೂತನ ಮನೆಯೊಂದನ್ನು ನಿರ್ಮಿಸಲು ಕಟೀಲು ಮೇಳದ ಖ್ಯಾತ ಭಾಗವತರಾದ ಸತೀಶ್ ಪಟ್ಲ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂದಾಗಿದ್ದು, ನೂತನ ಮನೆಯ ಕಾಮಗಾರಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಲಾಯಿತು.

ಕೊಣಾಜೆಯ ಅಣ್ಣೆರೆಪಾಲು ಎಂಬಲ್ಲಿ ಪುಟ್ಟ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಕುಡುಂಬಿ ಜನಾಂಗದ ದೇವಪ್ಪ ಗೌಡರ ಹರಕಲು ಹಂಚಿನ ಮನೆಯು ಕಳೆದ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದ ಪರಿಣಾಮ ದೇವಪ್ಪ ಕುಟುಂಬಸ್ಥರು ಸಂಕಷ್ಟದಲ್ಲಿದ್ದರು.

ಭೂಮಿಪೂಜೆ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಆರ್ಥಿಕವಾಗಿ ಹಿಂದುಳಿದ ಯಕ್ಷಗಾನ ಕಲಾವಿದರನ್ನು ಗುರುತಿಸಿ ಅವರಿಗೆ ಆರ್ಥಿಕ ಶಕ್ತಿ ತುಂಬುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಅಧ್ಯಕ್ಷರಾದ ಸತೀಶ್ ಪಟ್ಲರವರ ಸೇವೆ ದೇವರು ಮೆಚ್ಚುವಂತದ್ದು. ಬಡ ಯಕ್ಷಗಾನ ಕಲಾವಿದರಿಗೆ ಮನೆ ಕಟ್ಟಿಕೊಡುವ ಅವರ ಕನಸು ನನಸಾಗಿ ಜಿಲ್ಲೆಯಲ್ಲದೆ ರಾಜ್ಯಾದ್ಯಂತ ಸಾವಿರ ಮನೆ ಕಟ್ಟುವಂತಾಗಲೆಂದು ಹಾರೈಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ಜಿಲ್ಲೆಯ ಬಡ ಯಕ್ಷಗಾನ ಕಲಾವಿದರಿಗೆ 100 ಮನೆ ಕಟ್ಟಿ ಕೊಡುವ ಮಹತ್ವಾಕಾಂಕ್ಷೆಯ "ಯಕ್ಷಾಶ್ರಯ" ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಅದರ ಭಾಗವಾಗಿ ಮೊದಲ ಮನೆಯನ್ನು ಕೊಣಾಜೆಯ ದೇವಪ್ಪ ಗೌಡರಿಗೆ ನಿರ್ಮಿಸಿ ಕೊಡಲಾಗುತ್ತಿದ್ದು, ಬಡ ಯಕ್ಷಗಾನ ಕಲಾವಿದರ ಸಹಾಯಕ್ಕೆ ಸಮಾಜದ ಎಲ್ಲಾ ವರ್ಗದ ಜನರು ಸಹಯ ಹಸ್ತ ಚಾಚುವಂತೆ ಸತೀಶ್ ಪಟ್ಲರು ವಿನಂತಿಸಿದರು.

ಪಟ್ಲ ಫೌಂಡೇಶನ್‌ನ ಕಾರ್ಯದರ್ಶಿಗಳಾದ ಪುರುಷೋತ್ತಮ್ ಭಂಢಾರಿ ಅಡ್ಯಾರು, ಕೋಶಾಧಿಕಾರಿ ಸಿ.ಎ ಸುದೇಶ್ ಕುಮಾರ್, ಸದಸ್ಯರಾದ ಸತೀಶ್ ಶೆಟ್ಟಿ ಎಕ್ಕಾರ್, ಅಶ್ವಿತ್ ಶೆಟ್ಟಿ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವಿ, ರಾಮಚಂದ್ರ, ಗೋವಿಂದ ಗೌಡ, ಪ್ರಕಾಶ್ ಶೆಟ್ಟಿ ಸ್ಥಳೀಯ ಬಿಜೆಪಿ ಸಮಿತಿ ಅಧ್ಯಕ್ಷ ಸನತ್ ಕುಮಾರ್, ಮುಖಂಡರಾದ ರಿತೇಶ್ ಶೆಟ್ಟಿ ಹೊಸಮನೆ, ಶೇಖರ್ ಕೊಪ್ಪಳ, ನರ್ಸು ಗೌಡ, ಗೋಪಾಲ ಗೌಡ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News