×
Ad

ಶರತ್ ಮಡಿವಾಳ ಹತ್ಯೆ ಪ್ರಕರಣದ ಆರೋಪಿಯ ಮನೆಗೆ ಪೊಲೀಸರ ದಾಳಿ

Update: 2017-09-02 22:19 IST

ಬಂಟ್ವಾಳ, ಸೆ. 2: ಶರತ್ ಮಡಿವಾಳ ಹತ್ಯೆ ಪ್ರಕರಣದ ಆರೋಪಿ ಖಲಂದರ್ ಎಂಬಾತನ ಮನೆ ಹಾಗೂ ಮಾವನ ಮನೆಗೆ ಪೊಲೀಸರ ತಂಡವೊಂದು ದಾಳಿ ನಡೆಸಿದ ಘಟನೆ ಶನಿವಾರ ನಡೆದಿದ್ದು, ಈ ಸಂದರ್ಭ ಪೊಲೀಸರು ಪವಿತ್ರ ಕುರ್‍ಆನ್ ಎಸೆದದ್ದಲ್ಲದೆ, ಮದ್ರಸದ ಪುಸ್ತಕಗಳನ್ನು ಹರಿದು ದಾಂಧಲೆ ನಡೆಸಿದ್ದಾರೆ ಎಂದು ಖಲಂದರ್ ನ ಮನೆಯವರು ಆರೋಪಿಸಿದ್ದಾರೆ.

ಶರತ್ ಹತ್ಯೆ ಪ್ರಕರಣದ ಆರೋಪಿ ಖಲಂದರ್ ನ ಸಜಿಪ ಮುನ್ನೂರು ಗ್ರಾಮದ ಪಣೋಲಿಬೈಲ್ ನೀಲ್ಯ ಎಂಬಲ್ಲಿರುವ ಮನೆಗೆ ಬೆಳಗ್ಗೆ 10:30ರ ವೇಳೆಗೆ ದಾಳಿ ನಡೆಸಿದ ಪೊಲೀಸರು ಮಧ್ಯಾಹ್ನ 2:30ರವರೆಗೆ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಮನೆಯಲ್ಲಿದ್ದ ವಸ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದಲ್ಲದೆ ಪವಿತ್ರ ಕುರ್‍ಆನ್, ಮದ್ರಸದ ಪುಸ್ತಕಗಳನ್ನು ಎಸೆದು ತೆರಳಿದ್ದಾರೆ ಎಂದು ಮನೆ ಮಂದಿ ಆರೋಪಿಸಿದ್ದಾರೆ. 

ಬಂಟ್ವಾಳ ನಗರ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ಗೌಡ, ಉಪ್ಪಿನಂಗಡಿ ಠಾಣೆ ಎಸ್ಸೈ ನಂದಕುಮಾರ್, ಪುತ್ತೂರು ಸಿಐ ಮಹೇಶ್ ಪ್ರಸಾದ್ ಅವರನ್ನೊಳಗೊಂಡ ತಂಡ ಏಕಾಏಕಿ ಮನೆಯೊಳಗೆ ನುಗ್ಗಿ ಹುಡುಕಾಟದಲ್ಲಿ ತೊಡಗಿದರು. "ಮನೆಯ ಹಾಲ್‍ನ ಕಪಾಟಿನಲ್ಲಿದ್ದ ಕುರ್‍ಆನ್, ಮದ್ರಸ ಹಾಗೂ ಇತರ ಪುಸ್ತಕಗಳನ್ನು ಹೊರಗೆ ಎಸೆಯತೊಡಗಿದ್ದರು. ಈ ಸಂದರ್ಭ ಕಪಾಟಿನಲ್ಲಿದ್ದ ಪವಿತ್ರ ಕುರ್‍ಆನ್ ತೆಗೆದಾಗ ಅದನ್ನು ಅಲ್ಲಿಯೇ ಇಡಿ ಎಂದು ಹೇಳುತ್ತಿದ್ದಂತೆ ನಮ್ಮ ಎದುರಲ್ಲೇ ಪೊಲೀಸನೊಬ್ಬ ಕುರ್‍ಆನ್ ಅನ್ನು ಎಸೆದು ದಾಂಧಲೆ ನಡೆಸಿದ್ದಾನೆ" ಎಂದು ಖಲಂದರ್‍ನ ತಾಯಿ ಮೈಮೂನಾ ಆರೋಪಿಸಿದ್ದಾರೆ. 

"ತದನಂತರ ಪೊಲೀಸರು ಮಕ್ಕಳ ಮದ್ರಸದ ಪುಸ್ತಕಗಳನ್ನು ಕೂಡಾ ಚಿಲ್ಲಾಪಿಲ್ಲಿ ಮಾಡತೊಡಗಿದರು. ಅದು ಮದ್ರಸದ ಪುಸ್ತಕಗಳಾಗಿದ್ದು, ಅದರಲ್ಲಿ ಏನೂ ಇಲ್ಲ ಎಂದು ಹೇಳಿದಾಗ, 'ನಿಮ್ಮ ಗುರುಗಳು ಎಲ್ಲರನ್ನು ಕೊಲ್ಲಲು ಕಲಿಸುವುದೇ ಮದ್ರಸದಲ್ಲಿ' ಎಂದು ಪೊಲೀಸರು ರೇಗಾಡಿದ್ದಾರೆ" ಎಂದು ಮೈಮುನಾ ಆರೋಪಿಸಿದ್ದಾರೆ. 

"ಸಮವಸ್ತ್ರ ಹಾಗೂ ಸಿವಿಲ್‍ ವಸ್ತ್ರದಲ್ಲಿದ್ದ ಪೊಲೀಸರು ಮನೆಯೊಳಗೆ ಯಾವುದೇ ಅನುಮತಿ ಇಲ್ಲದೆ ನುಗ್ಗಿದ್ದಾರೆ. ಯಾಕೆ ಬಂದಿದ್ದೀರಿ, ಏನು ಹುಡುಕಾಡುತ್ತಿದ್ದೀರಿ ಎಂದು ಕೇಳಿದಾಗ ಶರತ್‍ನ ಕೊಲೆಗೆ ನಿಮ್ಮ ಮಗನಿಗೆ ಒಂದು ಕೋಟಿ ರೂಪಾಯಿ ಸಿಕ್ಕಿದೆ. ಆ ಹಣ ಎಲ್ಲಿ ಅಡಗಿಸಿಟ್ಟಿದ್ದೀರಿ. ಅದನ್ನು ತೆಗೆದುಕೊಂಡು ಹೋಗಲು ನಾವು ಬಂದಿದ್ದೇವೆ" ಎಂದು ಪೊಲೀಸರು ಉತ್ತರಿಸಿದ್ದಾರೆ ಎಂದು ಮೈಮುನಾ ತಿಳಿಸಿದ್ದಾರೆ. 

"ಮನೆಯೊಳಗಿದ್ದ ಎಲ್ಲ ವಸ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿ ಇಡೀ ಮನೆಯನ್ನು ಜಾಲಾಡಿದ್ದಾರೆ. ಈ ವೇಳೆ ಬೆಡ್‍ವೊಂದನ್ನು ಹರಿದು ಅದರ ಒಳಗೆ ಕೂಡಾ ಹುಡುಕಾಡತೊಡಗಿದರು" ಎಂದು ಆರೋಪಿಸಿರುವ ಮೈಮುನಾ, "ನಿಮ್ಮ ಮಗನನ್ನು ನಮಗೆ ಒಪ್ಪಿಸಿ. ಇಲ್ಲದಿದ್ದರೆ ಎರಡು ದಿನಗಳಲ್ಲಿ ನಿಮ್ಮನ್ನು ಕೂಡಾ ಬಂಧಿಸಲಾಗುವುದು. ನಿಮ್ಮ ಮಗ ಸಿಕ್ಕಿದರೆ ಶೂಟ್ ಮಾಡಿ ಕೊಲ್ಲಲಾಗುವುದು" ಎಂದು ಬೆದರಿಕೆ ಹಾಕಿರುವ ಪೊಲೀಸರು, ಖಲಂದರ್‍ನ ಶಾಲೆಯ ಅಂಕಪಟ್ಟಿಗಳನ್ನು ಕೊಂಡೊಯ್ದಿದ್ದಾರೆ" ಎಂದು ಮೈಮೂನಾ ತಿಳಿಸಿದ್ದಾರೆ. 

'ಖಲಂದರ್ ಮಾವನ ಮನೆಗೆ ದಾಳಿ' : ಖಲಂದರ್ ಮನೆಗೆ ದಾಳಿ ನಡೆಸಿದ ಪೊಲೀಸರು ಬಳಿಕ ಪಾಣೆಮಂಗಳೂರು ಅಕ್ಕರಂಗಡಿಯಲ್ಲಿರುವ ಖಲಂದರ್‍ನ ಪತ್ನಿಯ ಮನೆಗೂ ಪೊಲೀಸರು ದಾಳಿ ನಡೆಸಿದ್ದಾರೆ. ಇಲ್ಲಿ ಕೂಡಾ ಮನೆಯಲ್ಲಿ ಜಾಲಾಡಿದ ಪೊಲೀಸರು ಕುರ್‍ಆನ್, ಮದ್ರಸದ ಪುಸ್ತಕ, ಪಾತ್ರೆ, ಬಟ್ಟೆಬರೆ ಎಸೆದು ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಮನೆಯವರು ದಾಳಿ ಸಂದರ್ಭದಲ್ಲಿ ಪೊಲೀಸನೊಬ್ಬ ಕುರ್‍ಆನ್ ತೆಗೆದುಕೊಂಡಾಗ ಪುತ್ತೂರು ಸಿಐ ಮಹೇಶ್ ಪ್ರಸಾದ್ ಕುರ್‍ಆನ್ ಅಲ್ಲಿಯೇ ಇಡುವಂತೆ ಸೂಚಿಸಿದರು. ಆದರೂ ಆ ಪೊಲೀಸ್ ಕುರ್‍ಆನ್ ಅನ್ನು ದೂರಕ್ಕೆ ಎಸೆದರು" ಎಂದು ಮನೆಯವರು ಆರೋಪಿಸಿದ್ದಾರೆ.

''ಮಗ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ''
ನನ್ನ ಮಗ ತಪ್ಪು ಮಾಡಿದ್ದರೆ ಆತನನ್ನು ಬಂಧಿಸಿ ಶಿಕ್ಷೆ ನೀಡಲಿ. ಖಲಂದರ್‍ಗೆ ಒಂದು ಕೋಟಿ ರೂಪಾಯಿ ಕೊಟ್ಟಿದ್ದಾರೆ, ಅದು ಎಲ್ಲಿದೆ ಎಂದು ಪೊಲೀಸರು ನಮ್ಮನ್ನು ವಿಚಾರಿಸಿದ್ದಾರೆ. ಮೊದಲು ಆತನಿಗೆ ಒಂದು ಕೋಟಿ ರೂಪಾಯಿ ನೀಡಿದವರನ್ನು ಪೊಲೀಸರು ಬಂಧಿಸಲಿ. ಹಲವು ಬಾರಿ ಪೊಲೀಸರು ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ. ಆತ ಎಲ್ಲಿದ್ದಾನೆ ಎಂಬುದು ನಮಗೆ ಗೊತ್ತಿಲ್ಲ. ನಾವೂ ಆತನನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದೇವೆ. ಆತನ ಹೆಸರಿನಲ್ಲಿ ಮನೆಗೆ ಬಂದು ಕುರುಕುಳ ನೀಡಬಾರದು. ಈ ಹಿಂದೆ ಎರಡು ಬಾರಿ ಠಾಣೆಗೆ ಕರೆದುಕೊಂಡು ಹೋದ ಪೊಲೀಸರು ಹೊಡೆದು ದೌರ್ಜನ್ಯ ನಡೆಸಿದ್ದಾರೆ. ಇನ್ನು ಪೊಲೀಸರು ಮನೆಗೆ ಬಂದು ದೌರ್ಜನ್ಯ ನಡೆಸಿದರೆ ಪೊಲೀಸರ ಎದುರಲ್ಲೇ ಮಕ್ಕಳೊಂದಿಗೆ ಸಾಮೂಹಿಕ ಆತ್ಮಹತ್ಯೆ ಮಾಡಲಿದ್ದೇವೆ. 
- ಟಿ.ಇಬ್ರಾಹೀಂ, ಖಲಂದರ್ ತಂದೆ 

ಕುರ್ ಆನ್ ಬಗ್ಗೆ ನಮಗೂ ಗೌರವ ಇದೆ ಹಾಗಾಗಿ ಮುಟ್ಟಿಲ್ಲ: ದ.ಕ. ಜಿಲ್ಲಾ ಎಸ್ಪಿ ಸುಧೀರ್ ರೆಡ್ಡಿ

ಶರತ್ ಹತ್ಯೆಯ ಪ್ರಮುಖ ಆರೋಪಿ ಖಲಂಧರ್ ಶಾಫಿ ಮನೆಯಲ್ಲಿ ಸರ್ಚ್ ವಾರೆಂಟ್ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ  ಕುರ್ ಆನ್ ಗ್ರಂಥವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಕುರ್ ಆನ್ ಪಾವಿತ್ರತೆಯ ಬಗ್ಗೆ ನಮಗೂ ಗೊತ್ತಿದೆ. ಹಾಗಾಗಿ ಕುರ್ ಆನ್ ನನ್ನು ಪೊಲೀಸರು ಮುಟ್ಟಲು ಹೋಗಿಲ್ಲ ಎಂದು ದ.ಕ. ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲೂ ಮುಸ್ಲಿಮರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಧಾರ್ಮಿಕ ಆಚರಣೆ, ನಂಬಿಕೆ ಹಾಗೂ ಧಾರ್ಮಿಕ ಶ್ರದ್ಧಾ ಕಾರ್ಯಗಳ ಬಗ್ಗೆ ತಿಳುವಳಿಕೆ ಇದೆ. ಅವುಗಳನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ಗೌರವಿಸುತ್ತೇವೆ. ಹಾಗಿದ್ದ ಮೇಲೆ ಕಾರ್ಯಾಚರಣೆ ವೇಳೆ ಕುರ್ ಆನ್ ನನ್ನು ಬಿಸಾಕಿ ಅವಮಾನಿಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.

ಕುರ್ ಆನ್ ಹಾಗೂ ಯಾವುದೇ ಧಾರ್ಮಿಕ ಗ್ರಂಥಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ. ಅವುಗಳನ್ನು ಅಶುದ್ಧ ಹಾಗೂ ಅಪವಿತ್ರವಾಗದಂತೆ ಕಾಪಾಡು ತ್ತೇವೆ. ಮಕ್ಕಳ ಕೈಗೆ ಸಿಗಬಾರದೆಂದು ಎತ್ತರದ ಸ್ಥಳದಲ್ಲಿಡಲಾಗುತ್ತದೆ. ಅಂಗಾಂಗ ಶುದ್ಧಿಗೊಳಿಸಿದ ನಂತರವೇ ಕುರ್ ಆನ್ ನನ್ನು  ವಾಚಿಸುತ್ತಾರೆ. ಧಾರ್ಮಿಕ ಗ್ರಂಥಗಳನ್ನು ಇಡಲು ಪ್ರತ್ಯೇಕ ಕವರ್, ಪೊಟ್ಟಣ, ಸ್ಟ್ಯಾಂಡ್ ಗಳು ಇರುತ್ತವೆ. ಅದೇ ರೀತಿಯಲ್ಲಿ ಖಲಂದರ್ ಮನೆಯಲ್ಲೂ ಕುರ್ ಆನ್ ಹಾಗೂ ಮಕ್ಕಳ ಮದ್ರಸ ಪಠ್ಯ ಪುಸ್ತಕಗಳನ್ನು ಇಡಲಾಗಿತ್ತು.

ಅವುಗಳನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ಕುರ್ ಆನ್ ಗ್ರಂಥವನ್ನು ಮುಟ್ಟಬೇಡಿ. ಅದನ್ನು ಮುಟ್ಟುವ ಅಧಿಕಾರ ನಮಗಿಲ್ಲ. ಅದಕ್ಕೆ ಅದರದ್ದೇಯಾದ ಪವಿತ್ರತೆ ಇದೆ ಎಂದು ಪೊಲೀಸ್ ಸಿಬ್ಬಂದಿ ಸೂಚನೆ ನೀಡಿದ್ದರು ಎಂದವರು ಸ್ಪಷ್ಟನೆ ನೀಡಿದ್ದಾರೆ.

ಸತ್ಯ ಮರೆಮಾಚಲು ಯತ್ನಿಸಿದರೆ ಕ್ರಮ

ಶರತ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಮನೆಯಲ್ಲಿ ಕೆಲವೊಂದು ದಾಖಲೆ ಪತ್ರ ದೊರೆತಿದ್ದು, ಅವುಗಳನ್ನು ಪರಿಶೀಲಿಸಲಾಗು ವುದು. ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಯುವ ಬಗ್ಗೆಯೂ ಮಾಹಿತಿ ಇದ್ದು, ಸದ್ಯದಲ್ಲಿಯೇ ಕ್ರಮ ಜರಗಿಸಲಾಗುವುದು ಎಂದ ಅವರು ಹೇಳಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News