ಅವರು ನನ್ನನ್ನು ಕೊಲ್ಲುತ್ತಾರೆ ನನ್ನನ್ನು ರಕ್ಷಿಸಿ ಎಂದ ಬಾಲಕ
ಚೆನ್ನೈ, ಸೆ. 2: “ಅವರು ನನ್ನನ್ನು ಹಾಗೂ ನನ್ನ ಕುಟುಂಬದ ಸದಸ್ಯರನ್ನು ಹತ್ಯೆ ಮಾಡುತ್ತಾರೆ. ದಯವಿಟ್ಟು ನಮ್ಮನ್ನು ರಕ್ಷಿಸಿ”. ಹೀಗೆ ಸರಕಾರದ ಸಹಾಯವಾಣಿಗೆ ಕರೆ ಮಾಡಿ ಮನವಿ ಮಾಡಿಕೊಂಡದ್ದು ಬೇರೆ ಯಾರೂ ಅಲ್ಲ. ಬ್ಲೂವೇಲ್ ಗೀಳು ಅಂಟಿಸಿಕೊಂಡ 12 ಹರೆಯದ ಬಾಲಕ. ಗುರುವಾರ ಭಾವೋದ್ರೇಕಗೊಂಡ ಬಾಲಕ ರಾಜ್ಯ ಸರಕಾರ ನಿರ್ವಹಿಸುತ್ತಿರುವ 104 ಸಹಾಯವಾಣಿಗೆ ಕರೆ ಮಾಡಿ, “ಅವರು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಕೊಲ್ಲುತ್ತಾರೆ” ಎಂದು ಸಮಾಲೋಚಕರಲ್ಲಿ ಹೇಳಿದ್ದಾನೆ. ಇನ್ನೊಂದು ತುದಿಯಲ್ಲಿದ್ದ ಸಮಾಲೋಚಕರು ಯಾರು ಎಂದು ಕೇಳಿದ್ದಾರೆ. ಅದಕ್ಕೆ ಬಾಲಕ ಕೆಲವು ಕ್ಷಣ ವೌನವಾದ. ಆನಂತರ ಬಾಲಕ, ತಾನು ಬ್ಲೂವೇಲ್ ಚಾಲೆಂಚ್‌ನೊಳಗೆ ಪ್ರವೇಶಿಸಿರುವುದನ್ನು ಒಪ್ಪಿಕೊಂಡ ಹಾಗೂ ತನ್ನನ್ನು ಅದರ ಒಳಗಿಂದ ಹೊರತರುವಂತೆ ವಿನಂತಿಸಿದ.
ಆನ್‌ಲೈನ್ ಅಪಾಯಕಾರಿ ಆಟ ಬ್ಲೂವೇಲ್ ಚಾಲೆಂಜ್ ಗೀಳು ಅಂಟಿಸಿಕೊಂಡು ದೇಶಾದಾದ್ಯಂತ ಹಲವರು ಆತ್ಮಹತ್ಯೆಗೆ ಶರಣಾದ ಬಳಿಕ, ಬ್ಲೂವೇಲ್ ಚಾಲೆಂಜ್‌ನೊಳಗೆ ಪ್ರವೇಶಿಸಿದ ಹಲವರು ನಿರ್ಗಮದ ದಾರಿ ಹುಡುಕುತ್ತಿದ್ದಾರೆ.
ಹೆಚ್ಚಿನವರು ಬ್ಲೂವೇಲ್ ಚಾಲೆಂಜ್‌ನಿಂದ ಹೊರಬರಲು ಹೆದರುತ್ತಿದ್ದಾರೆ. ಯಾಕೆಂದರೆ ಆಟಗಾರರು ಹಾಗೂ ಅವರ ಕುಟುಂಬವನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆತ್ಮಹತ್ಯೆ ತಡೆ ಕೇಂದ್ರ ಸ್ನೇಹದ ಸ್ಥಾಪಕಿ ಡಾ. ಲಕ್ಷ್ಮೀ ವಿಜಯ ಕುಮಾರ್ ಹೇಳಿದ್ದಾರೆ.
ಬ್ಲೂವೇಲ್ ಚಾಲೆಂಜ್‌ನ ಗೀಳು ಅಂಟಿಸಿಕೊಂಡ ಮಕ್ಕಳಲ್ಲಿ ಮೂರು ದಿನಗಳಲ್ಲಿ ಕನಿಷ್ಠ ಒಂದು ಮಗು ತಪ್ಪೊಪ್ಪಿಕೊಳ್ಳುತ್ತಿದೆ ಎಂದು ಇಲ್ಲಿನ ಇಬ್ಬರು ಪ್ರಮುಖ ಮನಃಶಾಸ್ತ್ರಜ್ಞರು ತಿಳಿಸಿದ್ದಾರೆ.
ಆನ್‌ಲೈನ್ ಆಡಳಿತಗಾರರು ನೀಡುವ 50 ಟಾಸ್ಕ್‌ಗಳನ್ನು ಪೂರ್ಣಗೊಳಿಸುತ್ತಾ ಹೋಗುವಾಗ ಆರಂಭದಲ್ಲಿ ಕುತೂಹಲ ಉಂಟಾಗುತ್ತದೆ. ಈ 50 ಟಾಸ್ಕ್‌ಗಳಲ್ಲಿ ಹೆಚ್ಚಿನವು ಸ್ವಛಿದ್ರಗೊಳಿಸುವಂತಹದ್ದು. ಕೊನೆಯ ಟಾಸ್ಕ್ ಆತ್ಮಹತ್ಯೆ ಮಾಡಿಕೊಳ್ಳುವುದು ಎಂದು ಅವರು ತಿಳಿಸಿದ್ದಾರೆ.