×
Ad

ಕರ್ನಾಟಕದಿಂದ ಮೋದಿ ಸಂಪುಟ ಸೇರುವವರು ಯಾರು ?

Update: 2017-09-02 23:27 IST

ಹೊಸದಿಲ್ಲಿ,ಸೆ.2: ಕೇಂದ್ರ ಸಚಿವ ಸಂಪುಟದ ಪುನರ್‌ರಚನೆ ರವಿವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಕರ್ನಾಟಕದ ಕೆನರಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸತ್ಯಪಾಲ ಸಿಂಗ್ ಸೇರಿದಂತೆ ಒಂಭತ್ತು ಹೊಸಬರು ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಸರಕಾರದಲ್ಲಿನ ಮೂಲಗಳು ಶನಿವಾರ ರಾತ್ರಿ ತಿಳಿಸಿವೆ. ಇದು 2019ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಸಂಪುಟದ ಅಂತಿಮ ವಿಸ್ತರಣೆಯಾಗಿರುವ ಸಾಧ್ಯತೆಯಿದೆ. ತನ್ಮಧ್ಯೆ ಸಂಪುಟ ಪುನರ್‌ರಚನೆಗೆ ಅನುಕೂಲವಾಗುವಂತೆ ಆರಕ್ಕೂ ಅಧಿಕ ಸಚಿವರು ಈಗಾಗಲೇ ತಮ್ಮ ಹುದ್ದೆಗಳಿಗೆ ರಾಜೀನಾಮೆಗಳನ್ನು ಸಲ್ಲಿಸಿದ್ದು, ಇನ್ನಷ್ಟು ಸಚಿವರು ಹುದ್ದೆಗಳನ್ನು ತೊರೆಯುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ,2014ರಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಈಗಾಗಲೇ ಎರಡು ಬಾರಿ ಸಂಪುಟ ಪುನರ್‌ರಚನೆ ಮಾಡಿದ್ದಾರೆ. ಇಂತಹ ಮೊದಲ ಕಸರತ್ತು 2014,ನ.9ರಂದು ನಡೆದಿದ್ದರೆ, 2015,ಜು.5ರಂದು ಮತ್ತೊಮ್ಮೆ ಸಂಪುಟ ಪುನರ್‌ರಚನೆಯಾಗಿತ್ತು.

ಅನಂತಕುಮಾರ ಹೆಗಡೆ ಮತ್ತು ಸತ್ಯಪಾಲ ಸಿಂಗ್ ಜೊತೆಗೆ ಉತ್ತರ ಪ್ರದೇಶದ ರಾಜ್ಯಸಭಾ ಸದಸ್ಯ ಶಿವಪ್ರತಾಪ ಶುಕ್ಲಾ, ಬಿಹಾರದ ಲೋಕಸಭಾ ಸದಸ್ಯ ಅಶ್ವಿನಿ ಕುಮಾರ ಚೌಬೆ, ಮಧ್ಯಪ್ರದೇಶದ ಸಂಸದ ವೀರೇಂದ್ರ ಕುಮಾರ, ಮಾಜಿ ಐಎಎಸ್ ಅಧಿಕಾರಿ ರಾಜಕುಮಾರ ಸಿಂಗ್, ಮಾಜಿ ಐಎಫ್‌ಎಸ್ ಅಧಿಕಾರಿ ಹರ್ದೀಪ ಸಿಂಗ್ ಪುರಿ, ಜೋಧಪುರ ಸಂಸದ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಕೇರಳದ ಮಾಜಿ ಐಎಎಸ್ ಅಧಿಕಾರಿ ಕೆ.ಆಲ್ಫೋನ್ಸ್ ಅವರು ಸಂಪುಟವನ್ನು ಸೇರಲಿರುವ ಹೊಸಮುಖ ಗಳಾಗಿದ್ದಾರೆ.

ಆದರೆ ಸಂಪುಟದಲ್ಲಿ ಜೆಡಿಯು ಮತ್ತು ಶಿವಸೇನೆ ಭಾಗಿಯಾಗಲಿವೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದು, ಸಂಜೆಯ ವೇಳೆಗೆ ಖಾತೆಗಳ ಹಂಚಿಕೆಯಾಗುವ ಸಾಧ್ಯತೆಯಿದೆ.

ನೂತನ ರಕ್ಷಣಾ ಸಚಿವರು ಯಾರಾಗಲಿದ್ದಾರೆ ಎಂಬ ವಿಷಯದ ಜೊತೆಗೆ ಹಾಲಿ ಸಚಿವರಾದ ಸುರೇಶ ಪ್ರಭು ಮತ್ತು ನಿತಿನ್ ಗಡ್ಕರಿ ಅವರ ಬಗ್ಗೆಯೂ ಊಹಾಪೋಹ ಗಳು ಕೇಳಿಬರುತ್ತಿವೆ. ಹಾಲಿ ರಕ್ಷಣಾ ಸಚಿವಾಲಯದ ಜವಾಬ್ದಾರಿಯನ್ನೂ ಹೊತ್ತಿರುವ ವಿತ್ತಸಚಿವ ಅರುಣ್ ಜೇಟ್ಲಿ ಅವರು ಅದನ್ನು ಕೊಡವಿಕೊಳ್ಳುವ ಸಂಕೇತವನ್ನು ಈಗಾಗಲೇ ನೀಡಿದ್ದಾರೆ. ಹೀಗಾಗಿ ರಕ್ಷಣಾ ಖಾತೆ ಗಡ್ಕರಿಯವರ ಹೆಗಲಿಗೇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸರಣಿ ರೈಲು ಅಪಘಾತಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದ ಪ್ರಭು ಅವರು ಬೇರೆ ಖಾತೆಗೆ ವರ್ಗಾವಣೆಗೊಳ್ಳಬಹುದು.

ವಿದ್ಯುತ ಸಚಿವ ಪಿಯೂಷ ಗೋಯಲ್, ತೈಲ ಸಚಿವ ಧಮೇಂದ್ರ ಪ್ರಧಾನ ಮತ್ತು ದೂರಸಂಪರ್ಕ ಸಚಿವ ಮನೋಜ ಸಿನ್ಹಾ ಅವರು ತಮ್ಮ ಖಾತೆಗಳನ್ನು ಉತ್ತಮವಾಗಿ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಸಂಪುಟ ಪುನರ್‌ರಚನೆ ಸಂದರ್ಭ ಭಡ್ತಿಗಳನ್ನು ಪಡೆಯಬಹುದು ಎಂದು ಹಿರಿಯ ಬಿಜೆಪಿ ನಾಯಕರೋರ್ವರು ತಿಳಿಸಿದರು.

ಸದ್ಯದ ಕೇಂದ್ರ ಸಂಪುಟವು ಪ್ರಧಾನಿ ಸೇರಿದಂತೆ 73 ಸಚಿವರನ್ನು ಹೊಂದಿದ್ದು, ಗರಿಷ್ಠ ಸಂಖ್ಯೆ 81ನ್ನು ಮೀರುವಂತಿಲ್ಲ. ಸಂವಿಧಾನಕ್ಕೆ ಮಾಡಲಾಗಿರುವ ತಿದ್ದುಪಡಿಯಂತೆ ಈ ಮಿತಿಯು ಲೋಕಸಭೆಯ ಸದಸ್ಯಬಲದ ಶೇ.15ನ್ನು ದಾಟಕೂಡದು. ಲೋಕಸಭೆಯ ಹಾಲಿ ಸದಸ್ಯಬಲ 545 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News