×
Ad

ವೈಜ್ಞಾನಿಕ ಕ್ರಮವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಲು ಸಲಹೆ

Update: 2017-09-03 13:41 IST

ಪಡುಬಿದ್ರೆ, ಸೆ. 3: ವೈಜ್ಞಾನಿಕ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡು, ತಜ್ಞರಿಂದ ಸರಿಯಾದ ಮಾಹಿತಿಗಳನ್ನು ಪಡೆದು ಕೃಷಿಕಾರ್ಯಗಳನ್ನು ಸುಲಭವಾಗಿಸುವ ಮೂಲಕ ಲಾಭದಾಯಕವಾಗಿಸಿಕೊಳ್ಳಿ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ಅಧ್ಯಕ್ಷ ಬಂಟಕಲ್ ರಾಮಕೃಷ್ಣ ಶರ್ಮಾ ಸಲಹೆ ಮಾಡಿದರು.

ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘ ಪಣಿಯೂರು ಹಾಗೂ ಉಡುಪಿ ಜಿಲ್ಲಾ ಕೃಷಿಕ ಸಂಘ ಇದರ ವತಿಯಿಂದ ಕುಂಜೂರು ಶ್ರೀದುರ್ಗಾ ದೇವಸ್ಥಾನದಲ್ಲಿ ಜರಗಿದ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾಹಿತಿ ನೀಡಿದರು.

ಹಸುವಿನ ಹಾಲಿಗಿಂತಲೂ ಸೆಗಣಿ ಮತ್ತು ಗೋ-ಮೂತ್ರ ಕೃಷಿಕರಿಗೆ ಲಾಭದಾಯಕ. ತೆಂಗಿನ ಮರಕ್ಕೆ ಕಟ್ಟೆ ಬಿಡಿಸುವ ನಮ್ಮ ಹಿಂದಿನ ಪದ್ಧತಿಯನ್ನು ಬಿಟ್ಟು 4ರಿಂದ 7ಅಡಿ ದೂರದಲ್ಲಿ ನೀರು, ಗೊಬ್ಬರವನ್ನು ಒದಗಿಸಬೇಕು. ನಮ್ಮ ಭಾಗದಲ್ಲಿ ಯಾವುದೇ ಬೆಳೆ ಬೆಳೆಯುವುದಾದರೂ ಪ್ರತಿ ಎಕರೆಗೆ 200 ಕೆ.ಜಿ ಸುಣ್ಣವನ್ನು ಬಳಸಿದಾಗ ಮಣ್ಣು ಆರೋಗ್ಯದಾಯಕವಾಗಿರುತ್ತದೆ ಎಂದರು.

ನೀರಿನಾಶ್ರಯ ಕಡಿಮೆಯಿರುವ ಜಮೀನಿನಲ್ಲಿ ಗೇರು, ಮಾವುಗಳ ಆಯ್ದ ತಳಿಗಳ ನಾಟಿ ಉಪಯುಕ್ತ. ಮಳೆಗಾಲದಲ್ಲಿ ತೋಟದಲ್ಲಿ ಒಸರು ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಅನುಸರಿಸಿ. ಬಾಳೆ ಕೃಷಿಗೆ ಬಾಳೆ ಗಿಡಗಳ ಬದಲಾಗಿ ಬಾಳೆ ಗೆಡ್ಡೆಗಳನ್ನು ನಾಟಿ ಮಾಡಿದಾಗ ಆರೋಗ್ಯವಂತ ಗಿಡಗಳ ಬೆಳವಣಿಗೆ ಸಾಧ್ಯ.

ಕೃಷಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಪು ಸಹಕಾರಿ ಬ್ಯಾಂಕ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಸರ್ಕಾರದಿಂದ ಅಥವಾ ಸಹಕಾರಿ ಬ್ಯಾಂಕ್‌ಗಳಿಂದ ದೊರೆಯುವ ಸೌಲಭ್ಯಗಳನ್ನು ಪಡೆಯುವಲ್ಲಿ ಯಾರಿಗೂ ಕೀಳರಿಮೆ ಬೇಡ. ಕೂಡು ಕುಟುಂಬ ಪದ್ಧತಿಯಡಿ ಕೃಷಿ ಪ್ರಧಾನವಾಗಿದ್ದ ಬುದ್ಧಿವಂತರ ನಾಡಿನ ಜನರ ಕೃಷಿಯಾಸಕ್ತಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಉದ್ಯೋಗ ಅರಸಿ ಪರವೂರಿನಲ್ಲಿರುವ ನಮ್ಮ ವಿದ್ಯಾವಂತರು ಮರಳಿ ಕೃಷಿಯತ್ತ ಒಲವು ಮೂಡಿಸಬೇಕಾಗಿದೆ ಎಂದರು.

ಜಿಲ್ಲಾ ಕೃಷಿಕ ಸಂಘ, ಕಾಪು ವಲಯ ಕಾರ್ಯದರ್ಶಿ ಎಮ್.ಗೋಪಾಲಕೃಷ್ಣ, ಕುಂಜೂರು ಶ್ರೀದುರ್ಗಾ ದೇವಸ್ಥಾನದ ನಿಕಟ ಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಮನೆ ದೇವರಾಜ ರಾವ್, ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘ ಪ್ರಬಂಧಕ ರತ್ನಾಕರ ಸೋನ್ಸ್, ಶ್ರೀದೇವಳದ ಪರ್ಯಾಯ ಅರ್ಚಕರಾದ ವೆ.ಮೂ.ಹರಿಕೃಷ್ಣ ಉಡುಪ ಮತ್ತು ಚಕ್ರಪಾಣಿ ಉಡುಪ ಹಾಗೂ ಕೃಷಿಕ ಸಂಘ ಕಾರ್ಯದರ್ಶಿ ವೇಣುಗೋಪಾಲ್ ಎಮ್. ಉಪಸ್ಥಿತರಿದ್ದರು.

ಚಕ್ರಪಾಣಿ ಉಡುಪ ಸ್ವಾಗತಿಸಿ, ಸುನಿಲ್ ನಿರೂಪಿಸಿ, ಶ್ರೀವತ್ಸ ರಾವ್ ಕುಂಜೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News