×
Ad

ಯುವ ಸಮುದಾಯ ಸರಕಾರಿ ಕೆಲಸಕ್ಕೆ ಬರಲಿ: ಲೋಕಾಯುಕ್ತ ನ್ಯಾ. ವಿಶ್ವನಾಥ ಕರೆ

Update: 2017-09-03 18:41 IST

ಮಂಗಳೂರು, ಸೆ.3: ಯುವ ಪೀಳಿಗೆ ಸರಕಾರಿ ಕೆಲಸಗಳತ್ತ ಹೆಚ್ಚಿನ ಆಸಕ್ತಿ ವಹಿಸುವ ಮೂಲಕ ಸಮಾಜ ಸೇವೆಗೆ ಮುಂದಾಗಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಕರೆ ನೀಡಿದ್ದಾರೆ.

ಅವರು ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಜಾಗತಿಕ ಬಂಟ ಪ್ರತಿಷ್ಠಾನ ಮಂಗಳೂರು ಇದರ 21ನೇ ವಾರ್ಷಿಕ ಸಮಾವೇಶ ಹಾಗೂ ನಿಟ್ಟೆ ವಿನಯ ಹೆಗ್ಡೆ ಅವರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವಜನತೆ ಕೇವಲ ವೈದ್ಯ, ಇಂಜಿನಿಯರಿಂಗ್ ಕ್ಷೇತ್ರದತ್ತ ಮಾತ್ರವೇ ಒಲವು ತೋರಿಸುವುದು ಸರಿಯಲ್ಲ. ದೇಶದ ಅಭಿವೃದ್ದಿ ದೃಷ್ಠಿಯಿಂದ ಸರಕಾರಿ ಕೆಲಸದ ಮೂಲಕ ಸಾರ್ವಜನಿಕರಿಗೆ ನೆರವು ನೀಡಲು ಮುಂದಾಗಬೇಕು ಎಂದು ಅವರು ಹೇಳಿದರು.

ಸಾರ್ವಜನಿಕ ಸೇವಾ ಪರೀಕ್ಷೆಗಳ ಜತೆಗೆ ಐಎಎಸ್, ಐಎಫ್‌ಎಸ್, ಐಪಿಎಸ್ ಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮವಾದ ಕೆಲಸಗಳನ್ನು ಮಾಡಬೇಕು. ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಲು ಸಾರ್ವಜನಿಕರು, ಒಳ್ಳೆಯ ಸಿದ್ಧಾಂತಗಳನ್ನು ರೂಢಿಸಿಕೊಂಡಿರುವ ಜನಪ್ರತಿನಿಧಿಗಳು ಕೂಡ ನೆರವಾಗಬೇಕು ಎಂದರು.

ಸನ್ಮಾನದ ಮೂಲಕ ಸಮಾಜದಲ್ಲಿ ಓರ್ವ ವ್ಯಕ್ತಿಯ ಸೇವೆ ಹಾಗೂ ಸಾಧನೆ, ಕೊಡುಗೆಯನ್ನು ಗುರುತಿಸುವ ಕೆಲಸವಾಗುತ್ತದೆ. ಇದೇ ರೀತಿ ಆತ ಮಾಡುವ ಕೆಲಸಕ್ಕೂ ಪ್ರೋತ್ಸಾಹ ನೀಡಿದಂತೆ ಎಂದು ಅವರು ಹೇಳಿದರು.

ಜಾಗತಿಕ ಬಂಟ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ನಿಟ್ಟೆ ವಿನಯ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಎನ್. ವಿನಯ್ ಹೆಗ್ಡೆ ಮಾತನಾಡಿ, ಬದಲಾಗುತ್ತಿರುವ ಸಮಾಜದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆ ಅತೀ ಉತ್ತಮ. ಸಮಾಜದಲ್ಲಿ ಹಾಗೂ ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕು ಎಂದರು.

ಇದೇ ಸಂದರ್ಭ ಡಾ. ಡಿ.ಕೆ. ಚೌಟ ದತ್ತಿನಿಧಿ ವತಿಯಿಂದ ಬಂಟ ಪ್ರತಿಷ್ಠಾನ ಪ್ರಶಸ್ತಿಯನ್ನು ಪ್ರಸಿದ್ಧ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ ಅವರಿಗೆ ಹಾಗೂ ಸಿಎ ಪದವಿಯನ್ನು ಮೊದಲ ಹಂತದಲ್ಲಿ ಯಶಸ್ವಿಯಾಗಿ ಪೂರೈಸಿದ ಸಿಎ ವಿಖ್ಯಾತ್ ರೈ ಅವರಿಗೆ ದಿ.ವೈ.ಆರ್. ಶೆಟ್ಟಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭ ಡಾ. ಶಾಂತಾರಾಮ ಶೆಟ್ಟಿ, ಜಾಗತಿಕ ಬಂಟ ಪ್ರತಿಷ್ಠಾನದ ಚೇರ್‌ಮನ್ ಬಿ. ಸಚ್ಚಿದಾನಂದ ಶೆಟ್ಟಿ, ಉಪಾಧ್ಯಕ್ಷ ಎ.ಜೆ. ಶೆಟ್ಟಿ, ರೀತಾ ಶೆಟ್ಟಿ, ಕೆ.ಎಂ. ಶೆಟ್ಟಿ, ಸಿಎ ಸುದೇಶ್ ಕುಮಾರ್ ಶೆಟ್ಟಿ, ಡಾ. ಬಿ. ಸಂಜೀವ ರೈ, ಸಿಎ ಎಚ್.ಆರ್.ಶೆಟ್ಟಿ, ಡಾ. ಕೆ.ಆರ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಳ್ಳಿಗೆ ತಾರನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಿ.ಸುರೇಂದ್ರ ಶೆಟ್ಟಿ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News