×
Ad

​ಬಿಜೆಪಿಯ ‘ಮಂಗಳೂರು ಚಲೋ’ ಹತ್ತಿಕ್ಕಲು ರಾಜ್ಯ ಸರಕಾರ ಯತ್ನ: ನಳಿನ್ ಆರೋಪ

Update: 2017-09-03 19:34 IST

ಮಂಗಳೂರು, ಸೆ. 3: ಬಿಜೆಪಿ ವತಿಯಿಂದ ಸೆ.7ರಂದು ಆಯೋಜಿಸಲಾಗಿರುವ ‘ಮಂಗಳೂರು ಚಲೋ’ ಹತ್ತಿಕ್ಕಲು ರಾಜ್ಯ ಸರಕಾರ ಯತ್ನಿಸುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.

ರವಿವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮಕೆಕ ಕಾನೂನು ಬದ್ಧವಾಗಿ ವಾರದ ಹಿಂದೆಯೇ ಅನುಮತಿ ಕೇಳಿದ್ದೇವೆ. ಪೂರಕವಾಗಿ ಎಲ್ಲ ಮಾಹಿತಿಗಳನ್ನೂ ನೀಡಲಾಗಿದೆ. ರಾಜ್ಯ, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರಿಗೂ ಮನವಿ ಸಲ್ಲಿಸಿದ್ದೇವೆ. ಆದರೆ ಇದುವರೆಗೂ ಅನುಮತಿ ನೀಡಿಲ್ಲ. ಇದರ ಹಿಂದೆ ರಾಜ್ಯ ಸರಕಾರದ ಕುಮ್ಮಕ್ಕು ಇದೆ. ಸರಕಾರಕ್ಕೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿದ್ದರೆ ಅನುಮತಿ ನೀಡಲಿ ಎಂದರು.

ರಾಜ್ಯ ಸರಕಾರ ಹಿಟ್ಲರ್‌ನಂತೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಪ್ರತಿಭಟನೆಗೆ ಆಗಮಿಸುವ ಇತರ ಜಿಲ್ಲೆಗಳ ಕಾರ್ಯಕರ್ತರಿಗೆ ಜಿಲ್ಲೆಯ ಸಭಾಭವನಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಸರಕಾರ ಪೊಲೀಸ್ ಇಲಾಖೆಯ ಮೂಲಕ ಸಭಾಭವನ ನೀಡದಂತೆ ಸಭಾಭವನದ ಮಾಲಕರಿಗೆ ಒತ್ತಡ ಹೇರುತ್ತಿದ್ದಾರೆ. ಕೆಲವು ಕಡೆಗಳಲ್ಲಿ ನೋಟಿಸ್‌ನ್ನೂ ನೀಡಲಾಗಿದೆ ಎಂದು ನಳಿನ್ ಕುಮಾರ್ ಆಕ್ಷೇಪಿಸಿದರು.

ಸರಕಾರ ಕಾರ್ಯಕ್ರಮ ನಿಯಂತ್ರಣ ಮಾಡಲು ಹೊರಟರೆ ಪರವೂರಿನ ಕಾರ್ಯಕರ್ತರಿಗೆ ಜಿಲ್ಲೆಯ ಕಾರ್ಯಕರ್ತರ ಮನೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸುತ್ತೇವೆ. ಇದಕ್ಕಾಗಿ ಈಗಾಗಲೇ 3-4 ಸಾವಿರ ಕಾರ್ಯಕರ್ತರು ಮುಂದೆ ಬಂದಿದ್ದಾರೆ. ಸರಕಾರ ಪರವಾನಗಿ ನೀಡದಿದ್ದರೂ ಪ್ರತಿಭಟನೆ ಮಾಡುತ್ತೇವೆ. ಈ ವೇಳೆ ಏನಾದರೂ ಅಹಿತಕರ ಘಟನೆಗಳು ನಡೆದರೆ ಮುಖ್ಯಮಂತ್ರಿ ಮತ್ತು ರಾಜ್ಯ ಸರಕಾರವೇ ಹೊಣೆ ಹೊರಬೇಕು ಎಂದು ನಳಿನ್ ಎಚ್ಚರಿಸಿದರು.

ಮಂಗಳೂರು ಚಲೋಗಾಗಿ ರಾಜ್ಯಾದ್ಯಂತ 10 ಸಾವಿರಕ್ಕೂ ಅಧಿಕ ಬೈಕ್‌ಗಳು ನೋಂದಣಿಯಾಗಿವೆ. ಸೆ.7ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ, ಪ್ರಹ್ಲಾದ್ ಜೋಶಿ, ಜಗದೀಶ ಶೆಟ್ಟರ್, ಸಿ.ಟಿ. ರವಿ ಸಹಿತ ಬಹುತೇಕ ಎಲ್ಲ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಮಂಗಳೂರು ಚಲೋ ಕೈ ಬಿಡುವಂತೆ ಸಚಿವ ಯು.ಟಿ. ಖಾದರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಳಿನ್, ಖಾದರ್ ಕಾನೂನು ಬಲ್ಲವರು ಎಂದು ತಿಳಿದುಕೊಂಡಿದ್ದೇನೆ. ಕಾರ್ಯಕ್ರಮಕ್ಕೆ ರಕ್ಷಣೆ ನೀಡುವುದು ಸರಕಾರದ ಜವಾಬ್ದಾರಿ. ಅವರಿಗೆ ರಕ್ಷಣೆ ನೀಡಲಾಗದಿದ್ದರೆ ಸೆ.12ರಂದು ನಡೆಯುವ ‘ಸೌಹಾರ್ದ ರ್ಯಾಲಿ’ಗೆ ಹೇಗೆ ರಕ್ಷಣೆ ನೀಡುತ್ತಾರೆ? ಎಂದು ಪ್ರಶ್ನಿಸಿದರು.

ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳ ಕೈವಾಡ ಬಯಲಾಗಿ, ಅವುಗಳನ್ನು ನಿಷೇಧಿಸಲು ಒತ್ತಾಯಿಸಿದರೆ ಸರಕಾರ ಕಣ್ಣು ಮುಚ್ಚಿ ಕುಳಿತಿವೆ. ಈಗ ಪ್ರಜಾಸತ್ತಾತ್ಮಕವಾಗಿ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾದರೆ ಅದನ್ನೂ ಹತ್ತಿಕ್ಕುವ ಕೆಲಸದಲ್ಲಿ ನಿರತವಾಗಿವೆ. ಸೆ.7ರ ಪ್ರತಿಭಟನೆಯಲ್ಲಿ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಲಾಗುತ್ತದೆ ಎಂದು ನಳಿನ್ ಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪ್ರಮುಖರಾದ ಗಣೇಶ್ ಕಾರ್ಣಿಕ್, ಕೃಷ್ಣ ಪಾಲೆಮಾರ್, ಮೋನಪ್ಪ ಭಂಡಾರಿ, ಬೃಜೇಶ್ ಚೌಟ, ಕಿಶೋರ್ ರೈ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News