ರೋಗಿ-ವೈದ್ಯರ ನಡುವಿನ ಸಂಬಂಧ ಗಟ್ಟಿಗೊಳ್ಳಬೇಕಿದೆ: ಜಯರಾಮ್ ಭಟ್
ಮಂಗಳೂರು, ಸೆ.3: ರೋಗಿಗಳು ವೈದ್ಯರ ಮೇಲಿಟ್ಟಿರುವ ನಂಬಿಕೆಯಂತೆ ವೈದ್ಯರು ಅದಕ್ಕೆ ಪೂರಕವಾಗಿ ಸ್ಪಂದಿಸಬೇಕು. ವೈದ್ಯರು ರೋಗಿಗಳ ಕುರಿತು ಕಾಳಜಿ, ಸಹಾನುಭೂತಿ ವ್ಯಕ್ತಪಡಿಸುವುದರೊಂದಿಗೆ ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಗಟ್ಟಿಗೊಳ್ಳಬೇಕಿದೆ ಎಂದು ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ. ಜಯರಾಮ್ ಭಟ್ ಹೇಳಿದರು
ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸೀರೋಗ ಶಾಸ ಸಂಘದ ಆಶ್ರಯದಲ್ಲಿ ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕ್ಯಾಂಪಸ್‌ನಲ್ಲಿ ಶನಿವಾರ ನಡೆದ ಮಂಗಳೂರು ಪ್ರಸೂತಿ ಶಾಸ್ತ್ರ ಮತ್ತು ಸೀರೋಗ ಶಾಸ್ತ್ರ ಸಮಾಜದ ರಾಜ್ಯಮಟ್ಟದ ಪ್ರಥಮ ಸಮ್ಮೇಳನ ಹಾಗೂ ಕಾರ್ಯಾಗಾರ ‘ಯುವ ಕಸೋಗ- 2017’ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರು ಎಂದಿಗೂ ರೋಗಿಗಳ ನಂಬಿಕೆಯನ್ನು ಮುರಿಯುವಂತಹ ಕಾರ್ಯಕ್ಕೆ ಇಳಿಯಬಾರದು. ಇತ್ತೀಚಿನ ದಿನಗಳಲ್ಲಿ ರೋಗಿ ಹಾಗೂ ವೈದ್ಯರ ನಡುವಿನ ಸಂಬಂಧ ಶಿತಿಲಗೊಳ್ಳುತ್ತಿವೆ. ಅದನ್ನು ದೂರ ಮಾಡುವ ಅಗತ್ಯವಿದೆ ಎಂದ ಜಯರಾಮ್ ಭಟ್, ವೈದ್ಯರು ರೋಗಿಗಳಿಗೆ ಚಿಕಿತ್ಸೆ ಕೊಡುವಾಗ ಅವರ ಸುರಕ್ಷತೆಯ ಕಡೆಗೆ ಹೆಚ್ಚಿನ ಮಹತ್ವ ನೀಡಲು ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ರೆ. ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಕಲಿಕೆ ಒಂದು ದಿನದಲ್ಲಿ ಮುಗಿಯುವಂತದ್ದಲ್ಲ. ಅದೊಂದು ನಿರಂತರವಾದ ಕಾರ್ಯ. ಇಂತಹ ಕಾರ್ಯಾಗಾರದ ಮೂಲಕ ಯುವ ವೈದ್ಯ ವಿದ್ಯಾರ್ಥಿಗಳು ಸಾಕಷ್ಟು ಕಲಿತು ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಬೇಕು. ಹೊಸ ತಂತ್ರಜ್ಞಾನ, ವಿನೂತನ ಚಿಕಿತ್ಸಾ ವಿಧಾನಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಬೇಕು ಎಂದರು.
ಕಸೋಗದ ಅಧ್ಯಕ್ಷ ವಿದ್ಯಾ ಭಟ್ ಮಾತನಾಡಿ ರಾಜ್ಯದ 20 ಜಿಲ್ಲೆಗಳಲ್ಲಿ ಕಸೋಗ ಸಂಘಟನೆಯಿದ್ದು, ಸುಮಾರು 2 ಸಾವಿರಕ್ಕೂ ಅಧಿಕ ಪ್ರತಿನಿಧಿಗಳಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ ಯುವ ಕಸೋಗ ಕಾರ್ಯಾಗಾರ ಮಂಗಳೂರಿನಲ್ಲಿ ನಡೆದಿದೆ. ಮುಂದಿನ ಯುವ ಕಸೋಗ ಬೆಳಗಾವಿಯಲ್ಲಿ ನಡೆಯಲಿದೆ ಎಂದರು.
ಈ ಸಂದರ್ಭ ಕಸೋಗದ ಗೌರವ ಕಾರ್ಯದರ್ಶಿ ಡಾ. ಶೋಭನಾ ಪಟ್ಟಾಡೆ, ಡಾ. ಅಣ್ಣಯ್ಯ ಕುಲಾಲ್ ಉಪಸ್ಥಿತರಿದ್ದರು. ಸಂಘಟನಾ ಅಧ್ಯಕ್ಷ ಡಾ. ಪ್ರೇಮಾ ಡಿಕುನ್ಹ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ವತ್ಸಲಾ ಕಾಮತ್ ವಂದಿಸಿದರು.