ತಪಾಸಣೆಯ ಬಗೆಗಿನ ಗೊಂದಲ ನಿವಾರಿಸಲು ಜಿಲ್ಲಾ ಉಸ್ತುವಾರಿ ಸಚಿವರ ಎದುರು ವೀಡಿಯೊ ಪ್ರದರ್ಶಿಸಲಿ: ಕೆ.ಅಶ್ರಫ್
ಮಂಗಳೂರು, ಸೆ. 4: ಬಂಟ್ವಾಳದಲ್ಲಿ ಇತ್ತೀಚೆಗೆ ನಡೆದ ಹತ್ಯೆ ಪ್ರಕರಣವೊಂದರ ಆರೋಪಿ ಖಲಂದರ್ ಮನೆಗೆ ಪೊಲೀಸರು ಶನಿವಾರ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ ಖಲಂದರ್‌ನ ಮನೆಯವರು ಪೊಲೀಸರ ವಿರುದ್ಧ ಕೆಲವೊಂದು ಆರೋಪ ಮಾಡಿರುತ್ತಾರೆ. ಇನ್ನೊಂದು ಕಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವಿತ್ರ ಗ್ರಂಥವನ್ನು ಪೊಲೀಸರು ಮುಟ್ಟಿಲ್ಲ. ನಮ್ಮ ಬಳಿ ವೀಡಿಯೊ ದಾಖಲೆ ಇದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಜನರಲ್ಲಿ ಇನ್ನೂ ಗೊಂದಲವಿದೆ ಅದನ್ನು ಪೊಲೀಸ್ ಅಧಿಕಾರಿಗಳು ನಿವಾರಿಸಬೇಕಾಗಿದೆ ಎಂದು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನೈಜ ವಿಚಾರ ಜನರಿಗೆ ಮನವರಿಕೆಯಾಗಬೇಕಾದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸರ ವಿರುದ್ಧ ಆರೋಪ ಮಾಡುತ್ತಿರುವ ಖಲಂದರ್‌ನ ಮನೆಯವರ ಮುಂದೆ ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ತಪಾಸಣೆಯ ವೀಡಿಯೊವನ್ನು ಮುಕ್ತವಾಗಿ ಪ್ರದರ್ಶಿಸಿ ಗೊಂದಲ ನಿವಾರಿಸಲು ಪ್ರಯತ್ನಿಸಲಿ ಎಂದು ಕೆ.ಅಶ್ರಫ್ ತಿಳಿಸಿದ್ದಾರೆ.
ಖಲಂದರ್ ಮನೆಯವರ ಹೇಳಿಕೆಯ ಪ್ರಕಾರ ಧಾರ್ಮಿಕ ಗ್ರಂಥಕ್ಕೆ ಅವಮಾನವಾಗುವ ಘಟನೆ ನಡೆದಿದೆ ಎನ್ನುವ ಆರೋಪವನ್ನು ಅವರು ನಮ್ಮ ಮುಂದೆ ಮಾಡಿದ್ದಾರೆ. ಅವರ ಹೇಳಿಕೆಯ ಪ್ರಕಾರ ಧಾರ್ಮಿಕ ಗ್ರಂಥಕ್ಕೆ ಪೊಲೀಸರಿಂದ ಅವಮಾನ ನಡೆದಿದ್ದರೆ ಅದು ಯಾರಿಂದ ನಡೆದಿದೆ ? ಅದಕ್ಕೆ ಯಾರು ಕಾರಣ ಎನ್ನುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಸಂಘಟನೆಯ ಮೂಲಕ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ. ಈ ಘಟನೆಯ ಬಗ್ಗೆ ಸಾರ್ವಜನಿಕರ ಹಿತದೃಷ್ಟಿಯಿಂದ ನೈಜ ವಿಚಾರವನ್ನು ತಿಳಿಯಲು ಸಂಘಟನೆ ಆಗ್ರಹಿಸುತ್ತದೆ. ಪೊಲೀಸರ ತನಿಖೆಗೆ ಅಡ್ಡಿಪಡಿಸುವ ಅಥವಾ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶ ನಮ್ಮ ಸಂಘಟನೆಗೆ ಇಲ್ಲ. ಈ ಬಗ್ಗೆ ಮುಸ್ಲಿಂ ಒಕ್ಕೂಟದ ಸದಸ್ಯರ ನಿಯೋಗ ಪೊಲೀಸ್ ತಪಾಸಣೆ ನಡೆದ ಖಲಂದರ್ ಮನೆಗೆ ರವಿವಾರ 15 ಜನರ ನಿಯೋಗ ಭೇಟಿ ನೀಡಿದೆ. ಈ ಬಗ್ಗೆ ಎಸ್.ಪಿ. ಯನ್ನು ಭೇಟಿ ಮಾಡುತ್ತೇವೆ. ಈ ಸಂದರ್ಭ ನೈಜ ಘಟನೆ ಏನಾಗಿದೆ ಎನ್ನುವುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್ಲರಿಗೂ ಮನವರಿಕೆ ಮಾಡಲಿ ಎಂದು ಅಶ್ರಫ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸದಸ್ಯರಾದ ಹಮೀದ್ ಕುದ್ರೋಳಿ, ಅಬ್ದುಲ್ ಜಲೀಲ್ ಕೃಷ್ಣಾಪುರ, ಅಶ್ರಫ್ ಕಿನಾರ, ಸಿ.ಎಂ.ಮುಸ್ತಫಾ, ಸಾಲಿಹ್ ಬಜ್ಪೆ, ಇಸ್ಮಾಯಿಲ್ ಶಾಫಿ, ಮುಹಮ್ಮದ್ ಹನೀಫ್, ನಾಸಿರ್ ಅಹ್ಮದ್ ಬಜ್ಪೆ ಮೊದಲಾದವರು ಉಪಸ್ಥಿತರಿದ್ದರು.