ಲಷ್ಕರ್, ಜೈಶ್ ಉಗ್ರ ಸಂಘಟನೆಗಳು: ‘ಬ್ರಿಕ್ಸ್’ 2017 ಘೋಷಣೆ
ಕ್ಸಿಯಾಮೆನ್ (ಚೀನಾ), ಸೆ. 4: ಪ್ರಪಂಚದಲ್ಲಿ ಹಿಂಸೆ ಮತ್ತು ಭದ್ರತಾ ಕಳವಳಗಳಿಗೆ ಕಾರಣವಾಗುತ್ತಿರುವ ಭಯೋತ್ಪಾದಕ ಸಂಘಟನೆಗಳಲ್ಲಿ ಪಾಕಿಸ್ತಾನದಲ್ಲಿ ನೆಲೆಸಿರುವ ಲಷ್ಕರೆ ತಯ್ಯಿಬ ಮತ್ತು ಜೈಶೆ ಮುಹಮ್ಮದ್ ಸಂಘಟನೆಗಳೂ ಸೇರಿವೆ ಹಾಗೂ ಈ ಸಂಘಟನೆಗಳು ಐಸಿಸ್ ಭಯೋತ್ಪಾದಕ ಸಂಘಟನೆಗೆ ಸಮವಾಗಿವೆ ಎಂಬುದಾಗಿ ‘ಬ್ರಿಕ್ಸ್’ ದೇಶಗಳು ಸೋಮವಾರ ಹೇಳಿವೆ.
ಹಲವು ಸುತ್ತುಗಳ ಮಾತುಕತೆಗಳ ಬಳಿಕ ಅಂಗೀಕರಿಸಲಾದ ಹೇಳಿಕೆಯು ಭಾರತಕ್ಕೆ ಲಭಿಸಿದ ರಾಜತಾಂತ್ರಿಕ ವಿಜಯವಾಗಿದೆ.
ಗಡಿಯಾಚೆಯ ಭಯೋತ್ಪಾದನೆ ಬಗ್ಗೆ ಭಾರತ ವಿವಿಧ ಜಾಗತಿಕ ವೇದಿಕೆಗಳಲ್ಲಿ ಧ್ವನಿ ಎತ್ತುತ್ತಾ ಬರುತ್ತಿರುವುದನ್ನು ಸ್ಮರಿಸಬಹುದಾಗಿದೆ.
‘‘ಬ್ರಿಕ್ಸ್ ದೇಶಗಳಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಸೇರಿದಂತೆ ಜಗತ್ತಿನಾದ್ಯಂತ ನಡೆಯುತ್ತಿರುವ ಎಲ್ಲ ವಿಧದ ಭಯೋತ್ಪಾದನೆಗಳನ್ನು ನಾವು ಖಂಡಿಸುತ್ತೇವೆ. ಭಯೋತ್ಪಾದನೆಯ ಯಾವುದೇ ಕೃತ್ಯಕ್ಕೆ ಸಮರ್ಥನೆಯಿರಲು ಸಾಧ್ಯವಿಲ್ಲ’’ ಎಂದು ಚೀನಾದ ಬಂದರು ನಗರ ಕ್ಸಿಯಾಮೆನ್‌ನಲ್ಲಿ ನಡೆಯುತ್ತಿರುವ ಒಂಬತ್ತನೆ ಬ್ರಿಕ್ಸ್ ಸಮ್ಮೇಳನದಲ್ಲಿ ಅಂಗೀಕರಿಸಲಾದ ಹೇಳಿಕೆಯೊಂದು ತಿಳಿಸಿದೆ.
ಜಾಗತಿಕ ವೇದಿಕೆಯೊಂದರಲ್ಲಿ, ಲಷ್ಕರೆ ಮತ್ತು ಜೈಶೆ ಮುಂತಾದ ಭಾರತ ವಿರೋಧಿ ಭಯೋತ್ಪಾದಕ ಗುಂಪುಗಳನ್ನು ಐಸಿಸ್ ಭಯೋತ್ಪಾದಕ ಸಂಘಟನೆಯೊಂದಿಗೆ ಹೋಲಿಸಿರುವುದು ಇದೇ ಮೊದಲ ಬಾರಿಯಾಗಿದೆ.
ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಗಳನ್ನೊಳಗೊಂಡ ಐದು ದೇಶಗಳ ಗುಂಪು ‘ಬ್ರಿಕ್ಸ್’ ಸಮಾವೇಶ ಇಲ್ಲಿ ನಡೆಯುತ್ತಿದೆ.
ಜೈಶೆ ಮುಹಮ್ಮದ್ ಮುಖ್ಯಸ್ಥ ಅಝರ್ ಮಸೂದ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸುವ ಭಾರತದ ಪ್ರಯತ್ನಗಳನ್ನು ಈ ಹಿಂದೆ ಚೀನಾ ಹಲವು ಬಾರಿ ತಡೆದಿರುವುದನ್ನು ಸ್ಮರಿಸಬಹುದಾಗಿದೆ.
ಈ ಬಾರಿ, ಜೈಶೆ ಮುಹಮ್ಮದ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಕರೆಯಲು ಚೀನಾ ಏಕೆ ಒಪ್ಪಿತು ಎಂಬುದು ಗೊತ್ತಾಗಿಲ್ಲ.
ಮೋದಿ-ಪುಟಿನ್ ಮಾತುಕತೆಯಲ್ಲಿ ವ್ಯಾಪಾರ, ಹೂಡಿಕೆಗೆ ಆದ್ಯತೆ
ಚೀನಾದ ಕ್ಸಿಯಾಮೆನ್‌ನಲ್ಲಿ ನಡೆಯುತ್ತಿರುವ ‘ಬ್ರಿಕ್ಸ್’ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಬ್ರೆಝಿಲ್ ಅಧ್ಯಕ್ಷ ಮೈಕಲ್ ಟೆಮರ್ ಜೊತೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು.
ಮೋದಿ ಮತ್ತು ಪುಟಿನ್ ದ್ವಿಪಕ್ಷೀಯ ಬಾಂಧವ್ಯದ ವಿವಿಧ ಆಯಾಮಗಳ ಬಗ್ಗೆ ಚರ್ಚೆ ನಡೆಸಿದರು ಹಾಗೂ ಈ ಚರ್ಚೆಯಲ್ಲಿ ವ್ಯಾಪಾರ ಮತ್ತು ಹೂಡಿಕೆ ಪ್ರಮುಖವಾಗಿ ಪ್ರಸ್ತಾಪಗೊಂಡಿತು ಎಂದು ಭಾರತೀಯ ರಾಜತಾಂತ್ರಿಕರು ಹೇಳಿದರು.
ಉಭಯ ನಾಯಕರು ತೈಲ ಮತ್ತು ಪ್ರಾಕೃತಿಕ ಅನಿಲ ಕ್ಷೇತ್ರದ ಬಗ್ಗೆಯೂ ಚರ್ಚಿಸಿದರು.