ಕೀರನ್ ಪೊಲಾರ್ಡ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದು ಏಕೆ?

Update: 2017-09-04 15:28 GMT

ಜಮೈಕಾ, ಸೆ.4: ವೆಸ್ಟ್‌ಇಂಡೀಸ್ ಸ್ಟಾರ್ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಸಿಪಿಎಲ್) ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ್ದಾರೆ. ಉದ್ದೇಶಪೂರ್ವಕವಾಗಿ ನೋ-ಬಾಲ್ ಎಸೆದಿದ್ದ ಪೊಲಾರ್ಡ್ ಎದುರಾಳಿ ಸೈಂಟ್‌ಕಿಡ್ಸ್ ತಂಡದ ಬ್ಯಾಟ್ಸ್‌ಮನ್ ಎವಿನ್ ಲೂವಿಸ್ ಶತಕ ಪೂರೈಸಲು ತಡೆಯೊಡ್ಡಿದರು.

 ಸ್ಟಾರ್ ಆಟಗಾರ ಪೊಲಾರ್ಡ್‌ರ ಸಣ್ಣ ಬುದ್ದಿಗೆ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕೇವಲ 32 ಎಸೆತಗಳಲ್ಲಿ 6 ಬೌಂಡರಿ, 11 ಸಿಕ್ಸರ್‌ಗಳ ಸಹಿತ ಅಜೇಯ 97 ರನ್ ಗಳಿಸಿದ್ದ ಲೂವಿಸ್ ಸಿಪಿಎಲ್‌ನಲ್ಲಿ ವೇಗದ ಶತಕ ದಾಖಲಿಸುವ ಹೊಸ್ತಿಲಲ್ಲಿದ್ದರು. ಆದರೆ, ಬಾರ್ಬಡೋಸ್ ತಂಡದ ಪೊಲಾರ್ಡ್ ನೋ-ಬಾಲ್ ಎಸೆದು ಇತರೇ ರನ್ ನೀಡಿದರು. ಸೈಂಟ್‌ಕಿಟ್ಸ್ ತಂಡದ ಲೂವಿಸ್‌ಗೆ ಶತಕ ನಿರಾಕರಿಸಿದರು. ಸೈಂಟ್‌ಕಿಟ್ಸ್ 7ನೆ ಓವರ್‌ನಲ್ಲಿ 10 ವಿಕೆಟ್‌ಗಳಿಂದ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಬಾರ್ಬಡೊಸ್ ಕೇವಲ 128 ರನ್ ಗಳಿಸಿತ್ತು. ಲೂವಿಸ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಸೈಂಟ್‌ಕಿಟ್ಸ್ 7ನೆ ಓವರ್ ಅಂತ್ಯಕ್ಕೆ 127 ರನ್ ಗಳಿಸಿತ್ತು. ಆಗ 97 ರನ್ ಗಳಿಸಿದ್ದ ಲೂವಿಸ್‌ಗೆ ಸಿಪಿಎಲ್‌ನಲ್ಲಿ ವೇಗದ ಶತಕ ಹಾಗೂ ಟ್ವೆಂಟಿ-20ಯಲ್ಲಿ 2ನೆ ವೇಗದ ಶತಕ ಬಾರಿಸಲು ಕೇವಲ 3 ರನ್ ಅಗತ್ಯವಿತ್ತು. 8ನೆ ಓವರ್ ಬೌಲಿಂಗ್ ಮಾಡಿದ ಪೊಲಾರ್ಡ್ ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದು ಕ್ರೀಡಾವಿರೋಧಿ ವರ್ತನೆ ತೋರಿದ್ದಾರೆ.

ಪೊಲಾರ್ಡ್ ವರ್ತನೆಯನ್ನು ಟೀಕಿಸಿದ ಕ್ರಿಕೆಟ್ ವೀಕ್ಷಕವಿವರಣೆಗಾರ ಡ್ಯಾನಿ ಮೊರಿಸನ್,‘‘ಲೂವಿಸ್ ಇನಿಂಗ್ಸ್ ಶತಕಕ್ಕೆ ಅರ್ಹವಾಗಿತ್ತು. ನಾನು ಅವರ ಶತಕಕ್ಕಾಗಿ ಕಾತರದಿಂದಿದ್ದೆ. ಆದರೆ, ಪೊಲಾರ್ಡ್ ನಿರಾಶಾದಾಯಕವಾಗಿ ಪಂದ್ಯ ಕೊನೆಗೊಳಿಸಿದರು’’ ಎಂದರು.

ಏಳು ವರ್ಷಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಡಂಬುಲಾದಲ್ಲಿ 2010ರಲ್ಲಿ ನಡೆದಿದ್ದ ಭಾರತ-ಶ್ರೀಲಂಕಾ ನಡುವಿನ 3ನೆ ಏಕದಿನ ಪಂದ್ಯದಲ್ಲಿ ಭಾರತಕ್ಕೆ 1 ರನ್ ಅಗತ್ಯವಿತ್ತು. ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ಗೆ ಶತಕ ಪೂರೈಸಲು 1 ರನ್ ಬೇಕಾಗಿತ್ತು. ಲಂಕೆಯ ಸ್ಪಿನ್ನರ್ ಸೂರಜ್ ರಣದೀವ್ ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದು ಸೆಹ್ವಾಗ್‌ಗೆ ಶತಕ ನಿರಾಕರಿಸಿದ್ದರು. ಆನಂತರ ಸೂರಜ್ ಅವರು ಸೆಹ್ವಾಗ್‌ರಲ್ಲಿ ಕ್ಷಮೆ ಕೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News