ಮಾದಕ ದ್ರವ್ಯದ ಕುರಿತು ಜಾಗೃತೆ ಮೂಡಿಸಿ: ಜಿ.ಶಂಕರ್
ಉಡುಪಿ, ಸೆ.4: ಈಗಿನ ಯುವ ಸಮುದಾಯ ಮಾದಕ ದ್ರವ್ಯಗಳ ದಾಸರಾಗಿ ಹೆತ್ತವರನ್ನು ದಯನೀಯ ಸ್ಥಿತಿಗೆ ದಬ್ಬುತ್ತಿದೆ. ಈ ಬಗ್ಗೆ ಪೋಷಕರು, ಶಿಕ್ಷಕರು, ಪೊಲೀಸ್ ಇಲಾಖೆ ಎಚ್ಚರ ವಹಿಸಿ ಜಾಗೃತಿ ಮೂಡಿಸಬೇಕಿದೆ ಎಂದು ನಗರದ ಉದ್ಯಮಿ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ.ಜಿ.ಶಂಕರ್ ಹೇಳಿದ್ದಾರೆ.
ಉಡುಪಿಯ ಸಂವೇದನಾ ಫೌಂಡೇಶನ್ಸ್ ವತಿಯಿಂದ ಕಿದಿಯೂರು ಉದಯ ಕುಮಾರ್ ಫ್ಯಾಮಿಲಿ ಟ್ರಸ್ಟ್‌ನ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಉಡುಪಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಬೀದಿ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅರು ಮಾತನಾಡುತಿದ್ದರು.
ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಹೆತ್ತವರು ಮಕ್ಕಳನ್ನು ಶಿಕ್ಷಣ ಸಂಸ್ಥೆಗೆ ಸೇರಿಸುತ್ತಾರೆ. ಆದರೆ ಮಕ್ಕಳು, ಹೆತ್ತವರ ಕಣ್ಣು ತಪ್ಪಿಸಿ ಗಾಂಜಾ ಸೇವನೆ ಮಾಡಿ ಅಮೂಲ್ಯವಾದ ಜೀವನ ಕಳೆದುಕೊಳ್ಳುತ್ತಿದ್ದಾರೆ. ಅನೇಕರು ಗಾಂಜಾಕ್ಕಾಗಿ ಕಳ್ಳತನ, ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವುದು ವಿಷಾಧನೀಯ. ಈ ಬಗ್ಗೆ ಇಡೀ ಸಮಾಜವೇ ಜಾಗೃತವಾಗಿರಬೇಕು ಎಂದು ಎಚ್ಚರಿಸಿದರು.
ಬ್ಲೂವೇಲ್ ಗೇಮ್ಸ್: ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಒತ್ತಡ ಸೃಷ್ಟಿಸಿ ಜೀವ ಕಳೆದುಕೊಳ್ಳುವಂತೆ ಮಾಡುವ ಬ್ಲೂವೇಲ್ ಗೇಮ್ಸ್‌ನ ಕುರಿತು ಜಾಗೃತಿ ವಹಿಸಬೇಕಿದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳು ದುರ್ಬಳಕೆಯಾಗುತ್ತಿದ್ದು, ಸದ್ಬಳಕೆಯಾಗುವ ಅಗತ್ಯವಿದೆ. ಹೆತ್ತವರು ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ಇಡಬೇಕಾಗಿದೆ ಎಂದವರು ಸಲಹೆ ನೀಡಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಉದಯ ಕುಮಾರ್ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ್ ಬಾಬು, ಎಂಐಟಿ ಪ್ರಾಧ್ಯಾಪಕ ಡಾ.ನಾರಾಯಣ ಶೆಣೈ, ರಂಗಕರ್ಮಿ ಬಾಸುಮ ಕೊಡಗು, ಜನಪದ ವಿದ್ವಾಂಸೆ ಪದ್ಮಾವತಿ ಕೆ.ಆರ್. ಉಪಸ್ಥಿತರಿದ್ದರು.
ಸಂವೇದನಾ ಫೌಂಡೇಶನ್ಸ್ ಅಧ್ಯಕ್ಷ ಪ್ರಕಾಶ್ ಮಲ್ಪೆ ಸ್ವಾಗತಿಸಿದರು. ವಿಜಯ್ ಕುಮಾರ್ ವಂದಿಸಿ, ಶಮಂತ್ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.