90,000 ರೊಹಿಂಗ್ಯರು ಬಾಂಗ್ಲಾಕ್ಕೆ ಪಲಾಯನ
ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಸೆ. 4: ಮ್ಯಾನ್ಮಾರ್‌ನಲ್ಲಿ ಆಗಸ್ಟ್ ತಿಂಗಳಲ್ಲಿ ಭೀಕರ ಹಿಂಸಾಚಾರ ಸ್ಫೋಟಿಸಿದ ಬಳಿಕ, ಸುಮಾರು 90,000 ರೊಹಿಂಗ್ಯ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಹಿಂದಿನ ಹಿಂಸಾಚಾರಗಳ ವೇಳೆ ದೇಶ ತೊರೆದವರು ಈಗಾಗಲೇ ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ಇರುವುದರಿಂದ, ಹೊಸ ನಿರಾಶ್ರಿತರನ್ನು ನಿಭಾಯಿಸುವುದು ನೆರವು ಸಂಸ್ಥೆಗಳು ಮತ್ತು ಸ್ಥಳೀಯರಿಗೆ ಸವಾಲಿನ ವಿಷಯವಾಗಿದೆ. ನೆರವು ಸಂಸ್ಥೆಗಳ ಈಗಾಗಲೇ ಸೊರಗಿರುವ ಸಂಪನ್ಮೂಲಗಳ ಮೇಲೆ ಇದು ಹೊಸದಾಗಿ ಒತ್ತಡವನ್ನು ಹೇರಿದೆ.
ಡಝನ್‌ಗಟ್ಟಳೆ ಪೊಲೀಸ್ ಠಾಣೆಗಳು ಮತ್ತು ಸೇನಾ ನೆಲೆಯೊಂದರ ಮೇಲೆ ಆಗಸ್ಟ್ 25ರಂದು ರೊಹಿಂಗ್ಯ ಬಂಡುಕೋರರು ಸಂಘಟಿತ ದಾಳಿ ನಡೆಸುವುದರೊಂದಿಗೆ ಪ್ರಸಕ್ತ ಹಿಂಸಾಚಾರ ಆರಂಭವಾಗಿದೆ ಎಂಬುದಾಗಿ ಮ್ಯಾನ್ಮಾರ್ ಸರಕಾರ ಹೇಳುತ್ತಿದೆ.
ಆ ಬಳಿಕ ನಡೆದ ಘರ್ಷಣೆಗಳು ಮತ್ತು ಸೇನೆಯ ದಮನ ಕಾರ್ಯಾಚರಣೆಯಲ್ಲಿ ಕನಿಷ್ಠ 400 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮನೆಗಳ ದಹನ ಮತ್ತು ನಾಗರಿಕರ ಸಾವುಗಳಿಗೆ ರೊಹಿಂಗ್ಯ ಬಂಡುಕೋರರು ಕಾರಣ ಎಂಬುದಾಗಿ ಮ್ಯಾನ್ಮಾರ್ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ರೊಹಿಂಗ್ಯರನ್ನು ಮ್ಯಾನ್ಮಾರ್‌ನಿಂದ ಹೊರಗಟ್ಟುವ ಉದ್ದೇಶದಿಂದ ಮ್ಯಾನ್ಮಾರ್ ಸೇನೆಯೇ ಮನೆಗಳನ್ನು ಸುಡುವ ಮತ್ತು ಜನರನ್ನು ಕೊಲ್ಲುವ ಕಾರ್ಯದಲ್ಲಿ ತೊಡಗಿದೆ ಎಂಬುದಾಗಿ ಮಾನವಹಕ್ಕುಗಳ ಸಂಘಟನೆಗಳು ಮತ್ತು ಬಾಂಗ್ಲಾದೇಶಕ್ಕೆ ಪಾರಾಗಿ ಬಂದ ರೊಹಿಂಗ್ಯರು ಆರೋಪಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲೂ ರೊಹಿಂಗ್ಯ ಬಂಡುಕೋರರು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ್ದರೆಂದು ಹೇಳಲಾಗಿದ್ದು, ಆಗಲೂ ಹಿಂಸಾಚಾರ ನಡೆದಿತ್ತು. ಅಂದು ನಡೆದ ಸೇನಾ ಕಾರ್ಯಾಚರಣೆಗೆ ಬೆದರಿ ಸುಮಾರು 87,000 ರೊಹಿಂಗ್ಯರು ಗಡಿ ದಾಟಿ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದರು.