×
Ad

ರೊಹಿಂಗ್ಯರ ಮೇಲಿನ ದೌರ್ಜನ್ಯದ ವಿರುದ್ಧ ಮಾತಾಡಿ: ಸೂ ಕಿಗೆ ಮಲಾಲಾ ಕರೆ

Update: 2017-09-04 23:24 IST

ಲಂಡನ್, ಸೆ. 4: ಮ್ಯಾನ್ಮಾರ್‌ನಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯ ಮುಸ್ಲಿಮರನ್ನು ‘ಹೀನಾಯವಾಗಿ’ ನಡೆಸಿಕೊಳ್ಳುತ್ತಿರುವುದನ್ನು ಖಂಡಿಸುವಂತೆ ಅತ್ಯಂತ ಎಳೆಯ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಝಾಯ್ ಸಹ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕಿಗೆ ಕರೆ ನೀಡಿದ್ದಾರೆ ಹಾಗೂ ಈ ದೌರ್ಜನ್ಯದ ವಿರುದ್ಧ ಅವರು ಮಾತಾಡುವುದನ್ನು ಕೇಳಲು ಜಗತ್ತು ಕಾಯುತ್ತಿದೆ ಎಂದು ಅವರು ಹೇಳಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಆಗಸ್ಟ್‌ನಲ್ಲಿ ಹಿಂಸೆ ಸ್ಫೋಟಿಸಿದ ಬಳಿಕ ಸುಮಾರು 90,000 ರೊಹಿಂಗ್ಯರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಇದು ಮ್ಯಾನ್ಮಾರ್‌ನ ನಾಯಕಿ ಸೂ ಕಿಗೆ ಎದುರಾದ ದೊಡ್ಡ ಸವಾಲಾಗಿದೆ. ದೇಶದಲ್ಲಿ ಸುದೀರ್ಘ ಕಾಲದಿಂದ ಹಿಂಸಾಚಾರಕ್ಕೆ ಗುರಿಯಾಗಿರುವ ಅಲ್ಪಸಂಖ್ಯಾತರ ಪರವಾಗಿ ಅವರು ಮಾತನಾಡುತ್ತಿಲ್ಲ ಎಂಬ ಅಂತಾರಾಷ್ಟ್ರೀಯ ಸಮುದಾಯದ ಟೀಕೆಗೆ ಅವರು ಗುರಿಯಾಗಿದ್ದಾರೆ.

‘‘ರೊಹಿಂಗ್ಯರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಹಲವಾರು ವರ್ಷಗಳಿಂದ ನಾನು ಖಂಡಿಸುತ್ತಾ ಬಂದಿದ್ದೇನೆ’’ ಎಂದು ಟ್ವಿಟರ್‌ನಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ಮಲಾಲಾ ಹೇಳಿದ್ದಾರೆ. ‘‘ನನ್ನ ಸಹ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕಿ ಕೂಡ ಇದೇ ರೀತಿ ಮಾಡುವುದನ್ನು ನೋಡಲು ನಾನು ಕಾಯುತ್ತಿದ್ದೇನೆ’’ ಎಂದಿದ್ದಾರೆ.

‘‘ಸೂ ಕಿ ಮಾತನಾಡುವುದನ್ನು ನೋಡಲು ಜಗತ್ತು ಕಾಯುತ್ತಿದೆ ಹಾಗೂ ರೊಹಿಂಗ್ಯ ಮುಸ್ಲಿಮರು ಕಾಯುತ್ತಿದ್ದಾರೆ’’ ಎಂದು ಮಲಾಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News