×
Ad

ಬೈಕ್ ರ‍್ಯಾಲಿ ಬಗ್ಗೆ ಆಯಾಯ ಜಿಲ್ಲೆಯ ಪೊಲೀಸರ ತೀರ್ಮಾನ: ಸಚಿವ ರೈ

Update: 2017-09-05 14:27 IST

ಮಂಗಳೂರು, ಸೆ.5: ವಿವಿಧ ಜಿಲ್ಲೆಗಳಿಂದ ಬೈಕ್ ಮೂಲಕ ರ‍್ಯಾಲಿ ನಡೆಸುವ ಸಂದರ್ಭ ಸುಗಮ ಸಂಚಾರಕ್ಕೆ ವ್ಯವಸ್ಥೆಯ ಜತೆಗೆ ಏನಾದರೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಕಾನೂನಿನ ಪರಿಪಾಲನೆ ಮಾಡುವ ಹೊಣೆಗಾರಿಕೆ ಪೊಲೀಸರದ್ದು. ಆಯಾ ಜಿಲ್ಲೆಯ ಪೊಲೀಸರು ಈ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಸರಕಾರ ತೀರ್ಮಾನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾದಿಂದ ಹಮ್ಮಿಕೊಳ್ಳಲಾಗಿರುವ ಬೈಕ್ ರ‍್ಯಾಲಿ ಕುರಿತಂತೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ರೈ ಈ ಪ್ರತಿಕ್ರಿಯೆ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಯಾವುದೇ ಪ್ರತಿರೋಧ ಇರುವುದಿಲ್ಲ. ಆದರೆ ವಿವಿಧ ಜಿಲ್ಲೆಗಳಿಂದ ರ‍್ಯಾಲಿ ನಡೆಸುವುದರಿಂದ ಅಹಿತಕರ ಘಟನೆ ಆದಲ್ಲಿ ಅದು ಸರಕಾರ ಮೇಲೆ ಪರಿಣಾಮ ಬೀರುತ್ತೆ ಎಂದು ಅವರು ಹೇಳಿದರು.

ಸಂಘ ಪರಿವಾರಕ್ಕೆ ಸೇರಿದ ಕಾರ್ಯಕರ್ತರ ಹತ್ಯೆ ಮಾತ್ರ ಆಗಿರುವುದಲ್ಲ. ಕಳೆದ 15 ವರ್ಷಗಳಲ್ಲಿ ಅಲ್ಪಸಂಖ್ಯಾತರು, ಹಿಂದೂಗಳು ಸೇರಿದಂತೆ ಸಾಕಷ್ಟು ಅಮಾಯಕರ ಹತ್ಯೆ ನಡೆದಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ರೈ ಉತ್ತರಿಸಿದರು.

ನಮ್ಮ ನಡಿಗೆ ಯಾವುದೇ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿಲ್ಲ. ಇತ್ತೀಚೆಗೆ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಬಂಟ್ವಾಳದಲ್ಲಿ ನಡೆದ ಕೋಮು ಸಂಘರ್ಷದ ಸಂದರ್ಭ ಶಾಂತಿ ಪ್ರಿಯ ನಾಗರಿಕರಿಂದ ಬಂದ ಬೇಡಿಕೆಯ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವನ ನೆಲೆಯಲ್ಲಿ ಸಾಮರಸ್ಯದ ನಡಿಗೆ ನಡೆಸಲು ಮುಂದಾಗಿದ್ದೇವೆ. ಇದು ಹತ್ಯೆಯಲ್ಲಿ ಭಾಗಿಯಾದ ಸಂಘಟನೆಗಳನ್ನು ಹೊರತುಪಡಿಸಿ, ಜಿಲ್ಲೆಯ ನಾಗರಿಕರು,  ಚಿಂತಕರು, ಬುದ್ಧಿಜೀವಿಗಳನ್ನು ಒಟ್ಟು ಸೇರಿಸಿ ಒಂದು ಸೀಮಿತ ಪ್ರದೇಶದಲ್ಲಿ ನಡೆಸಲಾಗುವ ನಡಿಗೆ. ಅದಕ್ಕೆ ಶಾಂತಿ ಪ್ರಿಯ ನಾಗರಿಕರು ಸಹಕರಿಸಬೇಕು ಎಂದು ಅವರು ಹೇಳಿದರು.

ಜನರ ನಡುವೆ ದ್ವೇಷದ ಗೋಡೆ ನಿರ್ಮಾಣಕ್ಕೆ ಅವಕಾಶ ನೀಡೆವು: ಸಚಿವ ಖಾದರ್

ದ.ಕ. ಜಿಲ್ಲೆಯ ಕಾನೂನು ಸುವ್ಯವಸ್ಥೆ, ಸಾಮರಸ್ಯಕ್ಕೆ ದಕ್ಕೆಯಾಗದೆ, ಸೋದರತ್ವ ಕಾಪಾಡುವುದು ನಮ್ಮೆಲ್ಲರ ಜವಾಬ್ಧಾರಿ. ಅದ್ದರಿಂದ ಬೈಕ್ ರ‍್ಯಾಲಿಗೆ ಅವಕಾಶ ನೀಡುವುದು, ಬಿಡುವುದು ಪೊಲೀಸರಿಗೆ ಬಿಟ್ಟ ವಿಚಾರ. ಆದರೆ ಜನರ ಮಧ್ಯೆ  ಕಂದಕ ರಚನೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌  ಬಿಜೆಪಿ ಯುವ ಮೋರ್ಚಾದ ರ‍್ಯಾಲಿ ಕುರಿತಂತೆ ಪ್ರತಿಕ್ರಿಯಿಸಿದರು.

ಸಂಪೂರ್ಣ ಜವಾಬ್ಧಾರಿ: ಏನಾದರೂ ಅಹಿತಕರ ಘಟನೆ ಆದಲ್ಲಿ ಅದರ ಜವಾಬ್ಧಾರಿ ಪೊಲೀಸ್ ಇಲಾಖೆಗೆ ಬಿಟ್ಟದ್ದು. ಕೊಟ್ಟಿಲ್ಲ ಎಂದಾಗಲೂ ಸರಕಾರವನ್ನು ಪ್ರಶ್ನಿಸಿವುದು, ಏನಾದರೂ ಅಹಿತಕರ ಘಟನೆ ಆದಾಗಲೂ ಯಾಕೆ ಕೊಟ್ಟಿದ್ದು ಎಂದು ದೂಷಿಸುವುದು ಸರಕಾರವನ್ನೇ. ಹಾಗಾಗಿ ನಮಗೆ ಸಾಮರಸ್ಯವೇ ಮುಖ್ಯ. ಮನುಷ್ಯತ್ವ, ಸೋದರತೆ, ಪ್ರೀತಿ ವಿಶ್ವಾಸ ಅಗತ್ಯ. ಕೊಲೆ ಮಾಡಿದವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಶರತ್ ಮಡಿವಾಳರನ್ನು ಹತ್ಯೆ ಮಾಡಿದವರು ಎಲ್ಲೇ ಅಡಗಿ ಕುಳಿತಿದ್ದರೂ, ಅವರನ್ನು ಪತ್ತೆ ಹಚ್ಚುವ ಕೆಲಸ ಪೊಲೀಸ್ ಇಲಾಖೆ ಮೂಲಕ ಮಾಡಲಾಗುವುದು. ಅಶ್ರಫ್ ಕೊಲೆ ಹಿಂದೆ ಇರುವವರನ್ನೆಲ್ಲಾ ಪತ್ತೆ ಹಚ್ಚಿ ಶಿಕ್ಷೆ ಕೊಡುವ ಕೆಲಸವನ್ನೂ ಪೊಲೀಸ್ ಇಲಾಖೆಯ ಮೂಲಕ ಸರಕಾರ ಮಾಡಿಸಲಿದೆ. ಎಸ್‌ಡಿಪಿಐ, ಕೆಎಫ್‌ಡಿಯನ್ನು ನಿಷೇಧಿಸಬೇಕೆಂಬುದು ಕೂಡಾ ರ‍್ಯಾಲಿ ನಡೆಸುತ್ತಿರುವವರ ಬೇಡಿಕೆ. ಬಜರಂಗದಳವಿರಲಿ, ಕೆಎಫ್‌ಡಿ ಇರಲಿ, ಪರಸ್ಪರ ಕೊಲೆ ಮಾಡುತ್ತಿರುವ ಸಂಘಟನೆಗಳನ್ನು ರಾಷ್ಟ್ರ ವುಟ್ಟದಲ್ಲಿ ನಿಷೇಧಿಸಲಿ, ಮನವಿ ನೀಡಲಿ. ನಾವೇನು ಬೇಡ ಎಂದು ಹೇಳಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳೆದುರು ಗೆಲ್ಲಲು ಸಾಧ್ಯವಾಗದೆ ಅಲ್ಲಿ ಎಸ್‌ಡಿಪಿಐ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಮತ ವಿಭಜನೆ ಮೂಲಕ ರಾಜಕೀಯ ಲಾಭ ಪಡೆದು ಕೊನೆಗೆ ಕಾಂಗ್ರೆಸ್ ಪಕ್ಷವನ್ನು ದೂಷಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದವರು ಆರೋಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News